ಉಡುಪಿ: ಸೆ.21ರಂದು ‘ವಿಶ್ವ ಆಲ್ಝೈಮರ್ ದಿನ’ ಕಾರ್ಯಾಗಾರ

Update: 2017-09-19 17:41 GMT

ಉಡುಪಿ, ಸೆ.19: ಡಿಮೆನ್ಷಿಯಾ (ಮರೆಗುಳಿತನ) ಇದು ಹೆಚ್ಚಾಗಿ ವೃದ್ಧಾಪ್ಯ ದಲ್ಲಿ ಬರುವ ಗಂಭೀರ ಸ್ವರೂಪದ ಕಾಯಿಲೆ. ಮಾನಸಿಕ ಅಸಮತೋಲನ ಉಂಟುಮಾಡುವ ಈ ಕಾಯಿಲೆಯಲ್ಲಿ ವ್ಯಕ್ತಿಯ ಸ್ಮರಣ ಶಕ್ತಿ ನಶಿಸುವುದಲ್ಲದೆ ವ್ಯಕ್ತಿಯ ಸಾಮಾಜಿಕ, ಪರಸ್ಪರ ಭಾಷೆ, ತೀರ್ಪು, ದೈನಂದಿನ ಚಟುವಟಿಕೆ ಮತ್ತು ಯೋಜನೆಗಳಲ್ಲಿ ದುರ್ಬಲತೆಯನ್ನು ಉಂಟುಮಾಡುತ್ತದೆ. ಡಿಮೆನ್ಷಿಯಾದ ಪರಿಣಾಮಗಳು ವೈಯುಕ್ತಿಕ ಮಾತ್ರವಲ್ಲದೇ, ಕುಟುಂಬದ ಸಾಮಾಜಿಕ ಜೀವನದ ಮೇಲೂ ತೀವ್ರವಾದ ಪರಿಣಾಮಗಳನ್ನು ಉಂಟು ಮಾಡುತ್ತವೆ.

ಈ ಹಿನ್ನೆಲೆಯಲ್ಲಿ ಸೆ.21ರಂದು ‘ವಿಶ್ವ ಆಲ್ಝೈಮರ್ ದಿನ’ದ ಅಂಗವಾಗಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಆಶ್ರಯದಲ್ಲಿ ಬೆಳಗ್ಗೆ 10 ಕ್ಕೆ ಬ್ರಹ್ಮಗಿರಿಯ ಐಎಂಎ ಹಾಲ್‌ನಲ್ಲಿ ಉಚಿತ ಕಾರ್ಯಾಗಾ ವೊಂದನ್ನು ಹಮ್ಮಿಕೊಳ್ಳಲಾಗಿದೆ.

ಪ್ರಸ್ತುತ ಭಾರತದಲ್ಲಿ ಸುಮಾರು 3.7 ಮಿಲಿಯ ಜನರು ಆಲ್ಝೈಮರ್ (ಮರೆಗುಳಿ) ಕಾಯಿಲೆಯಿಂದ ಬಳಲುತ್ತಿದ್ದಾರೆ. ಮರೆಗುಳಿತನ ಕಾಯಿಲೆ ಇರುವ ರೋಗಿಯ ಪೋಷಕರಿಗೆ ಈ ಕಾಯಿಲೆ ಬಗ್ಗೆ ಅರಿವು ಇಲ್ಲದಿರುವುದು, ರೋಗಿಯ ಆರೈಕೆಯನ್ನು ಯಾವ ರೀತಿ ಮಾಡಬಹುದು ಎಂಬ ಸೂಕ್ತ ಮಾಹಿತಿ ಇಲ್ಲದೆ ರೋಗಿಯ ಆರೈಕೆ ಮಾಡುವುದರೊಂದಿಗೆ ಬಹುಬೇಗನೆ ಒತ್ತಡಕ್ಕೆ ಒಳಗಾಗುತ್ತಾರೆ. ಇಂಥ ಒತ್ತಡ ಕಡಿಮೆ ಮಾಡಿ ರೋಗಿ ಆರೈಕೆ ಕುರಿತಂತೆ ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಉಡುಪಿ ಹಿರಿಯ ನಾಗರಿಕರ ಸಂಘದ ಗೌರವಾಧ್ಯಕ್ಷ ಕೆ.ಪಿ.ಕೊಡಂಚ ಹಾಗೂ ಅಧ್ಯಕ್ಷ ಸಿ.ಎಸ್.ರಾವ್ ಭಾಗವಹಿಸಲಿದ್ದಾರೆ. ಡಾ.ಪಿ. ವಿ.ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆಯ ನಂತರ ಕಾರ್ಯಗಾರದಲ್ಲಿ ಮರೆಗುಳಿತನ, ಹಿರಿಯ ನಾಗರಿಕರಲ್ಲಿ ಕಂಡುಬರುವ ಇನ್ನಿತರ ಮಾನಸಿಕ ಸಮಸ್ಯೆಗಳು ಮತ್ತು ಹಿರಿಯ ನಾಗರಿಕರ ಆರೈಕೆ ಕುರಿತು ಮಾಹಿತಿ ನೀಡಲಾಗುವುದು.

ಪ್ರಾಯ ಸಂದಂತೆ ಹಿರಿಯ ನಾಗರೀಕರಲ್ಲಿ ಸಕ್ಕರೆ ಕಾಯಿಲೆ, ಬಿಪಿ, ರಕ್ತನಾಳ ಗಳ ಒತ್ತಡ, ಹೃದಯ ಸಂಬಂಧಿ ತೊಂದರೆ ಜೊತೆಗೆ, ಮರೆಗುಳಿತನ, ಖಿನ್ನತೆ, ಸ್ಟ್ರೋಕ್ ಇತ್ಯಾದಿ ನರ-ಮಾನಸಿಕ ರೋಗಗಳು ಕಂಡುಬರುವುದರಿಂದ ಹಿರಿಯ ನಾಗರಿಕರು ಅಂಗಾಂಗಗಳ ಮೇಲಿನ ಹತೋಟಿ ಕಳೆದುಕೊಂಡು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅಸಮರ್ಥರಾಗುತ್ತಾರೆ. ಈ ಎಲ್ಲಾ ಕಾರಣ ಗಳಿಗಾಗಿ ಸೆ. 21ರಂದು ಆಯೋಜಿಸಿರುವ ಕಾರ್ಯಾಗಾರ ಉಪಯುಕ್ತವಾಗಿದ್ದು, ಇದರ ಸದುಪಯೋಗವನ್ನು ಆಸಕ್ತರು, ಹಿರಿಯ ನಾಗರಿಕರು ಪಡೆದುಕೊಳ್ಳಬೇಕೆಂದು ಡಾ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News