ಬಂಟಕಲ್ಲು: ಸೆ.21ರಂದು ಯಕ್ಷ ಕಲಾವಿದ ಜನಾರ್ದನ ನಾಯಕ್‌ಗೆ ಸನ್ಮಾನ

Update: 2017-09-19 17:43 GMT

ಶಿರ್ವ, ಸೆ.19: ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದಲ್ಲಿ ಸೆ.21ರ ಗುರುವಾರ ಸಂಜೆ 5:30ಕ್ಕೆ ಜರುಗುವ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭೋತ್ಸವದಲ್ಲಿ ಹಿರಿಯ ಹವ್ಯಾಸಿ ಯಕ್ಷ ರಂಗಕಲಾವಿದ 74ರ ಹರೆಯದ ಬಂಟಕಲ್ಲು ಜನರ್ದನ ನಾಯಕ್‌ಗೆ 2017ನೇ ಸಾಲಿನ ಶರನ್ನವರಾತ್ರಿ ಗೌರವ ನೀಡಿ ಸನ್ಮಾನಿಸಲಾಗುವುದು.

ಜನಾರ್ದನ ನಾಯಕ್ ಮೂಲತ: ಕೃಷಿಕ. ಮಲ್ಲಿಗೆ ಕೃಷಿಯೊಂದಿಗೆ ಅವರು ರಸಗೊಬ್ಬರ ಮಾರಾಟ ಉದ್ಯಮವನ್ನು ಪ್ರಾರಂಭಿಸಿ ಮುನ್ನಡೆಸಿಕೊಂಡು ಬಂದು ಯಶಸ್ಸು ಕಂಡವರು. ಯಕ್ಷಗಾನ ಕಲಾಸಕ್ತರಾದ ಇವರು 1974ರಲ್ಲಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಯಕ್ಷಗಾನ ಕಲಾ ಸಂಘದ ಸದಸ್ಯರಾಗಿ ಹಿರಿಯ ಯಕ್ಷ ಗುರುಗಳಾಗಿದ್ದ ಕಟಪಾಡಿ ಸಮೀಪದ ಮಟ್ಟು ಸುಬ್ಬರಾವ್ ಶಿಷ್ಯನಾಗಿ ಕಾಲಿಗೆ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿದರು. ಯಕ್ಷಗಾನ ಗುರುಗಳಾದ ಕೊಕ್ಕರ್ಣೆ ಸೀತಾರಾಮ ರಾವ್‌ರಿಂದ ಹೆಜ್ಜೆಗಾರಿಕೆ ಹಾಗೂ ಗುಲ್ಮೆ ನಾರಾಯಣ ಪ್ರಭು, ಪ್ರಭಾಕರ ಇಂದ್ರಾಳಿ ಇವರಿಂದ ಇನ್ನೂ ಹೆಚ್ಚಿನ ಕೌಶಲ್ಯ ಪಡೆದು ಯಕ್ಷರಂಗ ವೇದಿಕೆಯಲ್ಲಿ ಕರ್ಣ, ಭೀಷ್ಮ, ಅರ್ಜುನ, ಕೃಷ್ಣ, ಮನ್ಮಥ, ಸುಧನ್ವ ಮೊದಲಾದ ಪಾತ್ರಗಳಲ್ಲಿ ಮಿಂಚಿದರು.

ಬಂಟಕಲ್ಲು ಮಾತ್ರವಲ್ಲದೇ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹವ್ಯಾಸಿ ಕಲಾವಿದರಾಗಿ ಭಾಗವಹಿಸಿ ಸುಮಾರು 34 ವರ್ಷಗಳ ಕಾಲ ಯಕ್ಷಕಲಾ ಸೇವೆ ನೀಡಿದ್ದಾರೆ.

ಗುರುವಾರ ಸಂಜೆ ಜರುಗುವ ಸಮಾರಂಭದಲ್ಲಿ ಉಡುಪಿ ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಳ್ವ , ದೇವ ಸ್ಥಾನದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್, ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಪ್ರಭು, ಬಂಟಕಲ್ಲು ಯಕ್ಷಗಾನ ಕಲಾ ಸಂಘದ ಸ್ಥಾಪಕ ಹಾಗೂ ಹಿರಿಯ ಅರ್ಚಕ ವೇದಮೂರ್ತಿ ಕೆ.ವೇದವ್ಯಾಸರಾಯ ಭಟ್ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಬಳಿಕ ಉಡುಪಿ ಗೋಪಾಲಕೃಷ್ಣ ಭಟ್ ಬಳಗದಿಂದ ಖ್ಯಾತ ಕಲಾವಿದರ ಕೂಡುವಿಕೆಯಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಬಿ.ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News