ಅನಾರೋಗ್ಯ ಪೀಡಿತ 7 ಮಕ್ಕಳಿಗೆ ನೆರವಾದ ರವಿ ಕಟಪಾಡಿ

Update: 2017-09-19 17:45 GMT

ಉಡುಪಿ, ಸೆ.19: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವಿಶಿಷ್ಟ ವೇಷವನ್ನು ಹಾಕುವ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ 5.12 ಲಕ್ಷ ರೂ. ಹಣವನ್ನು ರವಿ ಕಟಪಾಡಿ ಮತ್ತು ತಂಡದವರು ಏಳು ಮಂದಿ ಅನಾರೋಗ್ಯ ಪೀಡಿತ ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಇಂದು ವಿತರಿಸಿದರು.

 ಮಂಗಳವಾರ ಕಟಪಾಡಿ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡ ಬಿದ್ರೆಯ ಕಂಜೆನೈಟಲ್ ಇಥಿಯೋಸಿಸ್ ಕಾಯಿಲೆಯ ಒಂದೂವರೆ ವರ್ಷದ ಲಾವಣ್ಯ ಅವರಿಗೆ 2.5 ಲಕ್ಷ ರೂ., ಶಿವಮೊಗ್ಗದ ಬ್ಲಡ್ ಕ್ಯಾನ್ಸರ್ ಕಾಯಿಲೆಯ 11 ವರ್ಷದ ಮೆಹಕ್‌ಜಿಗೆ 60 ಸಾವಿರ ರೂ., ದೆಂದುರಕಟ್ಟೆಯ ಸುನಿತಾ ಪ್ರಕಾಶ್ ದಂಪತಿಯ ಒಂದೂವರೆ ತಿಂಗಳಿನ ಹಸುಗೂಸಿಗೆ 55 ಸಾವಿರ ರೂ., ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ಪಾಂಗಾಳದ ಕಿಶನ್‌ಗೆ 50 ಸಾವಿರ ರೂ., ಹೃದಯದ ತೊಂದರೆಯ ಬನ್ನಂಜೆಯ ಅನುಷ್‌ಗೆ 38 ಸಾವಿರ ರೂ., ಕೈಕಾಲಿನ ಸಮಸ್ಯೆಯ ಅತಿಶ್ ಶೆಟ್ಟಿಗೆ 30 ಸಾವಿರ ರೂ. ಹಾಗೂ ಅಲೆವೂರಿನ ಅರುಷಿಗೆ 15 ಸಾವಿರ ರೂ.ವನ್ನು ವಿತರಿಸಲಾಯಿತು.

ನೆರವು ವಿತರಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕೇಮಾರು ಸಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ, ಬಡವರ ಸೇವೆ ಎಂಬುದು ದೇವರ ಸೇವೆಯಾಗಿದೆ. ಇದುವೇ ನಿಜವಾದ ದೇವರ ಕಾರ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧಾ ಮಾತ ನಾಡಿದರು. ಈ ಸಂದರ್ಭದಲ್ಲಿ ರವಿಯವರ ಗುರು ಬನ್ನಂಜೆ ರಾಜ, ಕಲಾವಿದ ರಾದ ಸಂತೋಷ್ ಮತ್ತು ಗಣೇಶ್ ಶಿರ್ವ ಅವರನ್ನು ಗೌರವಿಸಲಾಯಿತು. ರವಿ ಕಟಪಾಡಿ ಮತ್ತು ಅವರ ತಾಯಿಯನ್ನು ಸನ್ಮಾನಿಸಲಾಯಿತು.

ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಪತ್ರಕರ್ತ ಪ್ರಕಾಶ್ ಸುವರ್ಣ, ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಕಾರ್ಯ ದರ್ಶಿ ಕೆ.ಮಹೇಶ್ ಶೆಣೈ ಉಪಸ್ಥಿತರಿದ್ದರು. ಉಪನ್ಯಾಸಕ ದಯಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉದ್ಯಾವರ ಗ್ರಾಪಂ ಸದಸ್ಯ ರವಿ ಕೋಟ್ಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News