ಹಳ್ಳಿಗಳ ಸಂಸ್ಕೃತಿ ಅನಾವರಣಕ್ಕೆ ಅಕಾಡಮಿ ಹೆಜ್ಜೆ: ಮಾಧ್ಯಮ ಸಂವಾದದಲ್ಲಿ ಅಧ್ಯಕ್ಷ ಎ.ಸಿ.ಭಂಡಾರಿ

Update: 2017-09-19 17:51 GMT

ಮಂಗಳೂರು, ಸೆ.19: ತುಳು ಸಂಸ್ಕೃತಿ ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿದೆ. ಅವುಗಳು ನಶಿಸಿ ಹೋಗುವ ಮುನ್ನ ಹಳ್ಳಿಗಳತ್ತ ಹೆಜ್ಜೆ ಹಾಕಿ ಸಂಸ್ಕೃತಿಯ ಅನಾವರಣ ಮತ್ತು ಸಾಧಕರನ್ನು ತುಳು ಲೋಕಕ್ಕೆ ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜರಗಿದ ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಅಕಾಡಮಿಗಳು ನಗರ ಕೇಂದ್ರಿತವಾಗಿದೆ ಎಂಬ ಮಾತಿದೆ. ಅಲ್ಲದೆ ಅಕಾಡಮಿಗಳು ಅಕಡಮಿಕ್ ಕೆಲಸಗಳನ್ನು ಬಿಟ್ಟು ಇತರ ಕೆಲಸ ಮಾಡುತ್ತಿದೆ ಎಂಬ ಆರೋಪವಿದೆ. ಆ ಕಲ್ಪನೆಯನ್ನು ದೂರ ಮಾಡುವ ಸಲುವಾಗಿ ಅಕಾಡಮಿಯನ್ನು ತುಳುನಾಡಿನ ಗ್ರಾಮಾಂತರ ಭಾಗಕ್ಕೆ, ಅದರಲ್ಲೂ ಹಳ್ಳಿಗಳ ಮೂಲೆ ಮೂಲೆಗೂ ಕೊಂಡೊಯ್ಯಬೇಕಾಗಿದೆ. ಅಲ್ಲಿನ ಶ್ರೀಮಂತ ತುಳು ಸಂಸ್ಕೃತಿಯ ಬಗ್ಗೆ ದಾಖಲೀಕರಣ ನಡೆಸಬೇಕಾಗಿದೆ. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತ ಖಾಸಗಿ ಮಸೂದೆ ಮುಂದಿನ ಸಂಸತ್ ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬೆಂಬಲ ನೀಡುವ ಸಲುವಾಗಿ ಕರ್ನಾಟಕ, ಕೇರಳ ಹಾಗೂ ಮುಂಬೈಯ ತುಳು ಭಾಷಿಗ ಸಂಸದರ ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಸಭೆ ನಡೆಸಿ ಗಮನಸೆಳೆಯುವ ಪ್ರಕ್ರಿಯೆ ನಡೆಸಲಾಗುವುದು ಎಂದು ಎ.ಸಿ.ಭಂಡಾರಿ ನುಡಿದರು.

ತುಳು ಭಾಷೆಗೆ ಸಂವಿಧಾನ ಮಾನ್ಯತೆಯ ಕುರಿತಂತೆ ಕಳೆದ ಬಾರಿ ಡಿ.ವೀರೇಂದ್ರ ಹೆಗ್ಗಡೆಯ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಈಗಾಗಲೇ ಖಾಸಗಿ ಮಸೂದೆ ಮಂಡಿಸಿದ್ದಾರೆ. ಇದರ ಮುಂದುವರಿದ ಭಾಗವೆಂಬಂತೆ ಮುಂದಿನ ಅಧಿವೇಶನದ ಮುನ್ನ ಸಂಸದರ ಗಮನಸೆಳೆಯಲು ಸಭೆ ಕರೆಯಲಾಗುವುದು ಎಂದು ಎ.ಸಿ.ಭಂಡಾರಿ ಹೇಳಿದರು.

‘ತುಳು ಭವನ’ ಎಂಬುದು ತುಳುವರ, ತುಳುನಾಡಿನ ಸ್ವಾಭಿಮಾನದ ಸಂಕೇತವಾಗಿದೆ. ಕೆಲವು ಕಾಮಗಾರಿಗಳು ಇನ್ನೂ ಬಾಕಿಯಾಗಿದ್ದು, ಸುಮಾರು 3.50 ಕೋ.ರೂ. ವೆಚ್ಚ ಅಂದಾಜಿಸಲಾಗಿದೆ. ತುಳು ಭವನದಲ್ಲಿ ಸುಸಜ್ಜಿತ ಸಭಾಭವನ, ತುಳುವಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ, ಗ್ರಂಥಾಲಯ ನಿರ್ಮಾಣವಾಗಬೇಕಿದೆ. ತುಳುಭವನದಲ್ಲಿ ಪ್ರತೀ ತಿಂಗಳಿಗೊಂದು ಗಣ್ಯರು, ಸಾಹಿತಿಗಳ ಜತೆಗೆ ‘ಪಾತೆರ ಕತೆ’ ನಡೆಸಲು ತೀರ್ಮಾನಿಸಲಾಗಿದೆ ಎಂದು ಎ.ಸಿ.ಭಂಡಾರಿ ನುಡಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಸ್ತುತ 1,647 ವಿದ್ಯಾರ್ಥಿಗಳು ತುಳು ಪಠ್ಯ ಅಭ್ಯಸಿಸುತ್ತಿದ್ದು, ಎಸೆಸೆಲ್ಸಿಯ ಮುಂದಿನ ಪರೀಕ್ಷೆಯನ್ನು 454 ವಿದ್ಯಾರ್ಥಿಗಳು ಬರೆಯಲಿದ್ದಾರೆ. 35 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ನಡೆಯುತ್ತಿದೆ ಎಂದು ಎ.ಸಿ.ಭಂಡಾರಿ ಹೇಳಿದರು.

ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ್ ರೈ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಪತ್ರಕರ್ತ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News