ದಸರಾ ಕವಿಗೋಷ್ಠಿಗೆ ಕರಾವಳಿಯ ಕವಿತ್ರಯರು

Update: 2017-09-19 18:05 GMT

ಮಂಗಳೂರು, ಸೆ.19:  ನಾಡಹಬ್ಬ ಮೈಸೂರು ದಸರಾದಲ್ಲಿ ಜರಗುವ ‘ವಿಖ್ಯಾತ ಕವಿಗೋಷ್ಠಿ’ಗೆ ಈ ಬಾರಿ ರಾಜ್ಯದ ಸಮಗ್ರ ಜಿಲ್ಲೆಗಳ ಮತ್ತು ಸ್ಥಳೀಯ ಭಾಷೆಗಳ ಆಯ್ದ ಕವಿಗಳನ್ನು ಆಹ್ವಾನಿಸಲಾಗಿದ್ದು, ಆ ಪೈಕಿ ಅವಿಭಜಿತ ದ.ಕ.ಜಿಲ್ಲೆಯಿಂದ ಕರಾವಳಿ ಭಾಗದ ಮೂವರು ಕವಿಗಳನ್ನು ಮೈಸೂರು ದಸರಾ ಆಚರಣ ಸಮಿತಿ ಆಮಂತ್ರಿಸಿದೆ.

ಪ್ರಾಧ್ಯಾಪಕ ಭಾಸ್ಕರ ರೈ ಕುಕ್ಕುವಳ್ಳಿ, ಕವಿ ಮುಹಮ್ಮದ್ ಬಡ್ಡೂರು, ಪತ್ರಕರ್ತ ಮೆಲ್ವಿನ್ ರೋಡ್ರಿಗಸ್ ಈ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದು, ಕ್ರಮವಾಗಿ ತುಳು, ಬ್ಯಾರಿ, ಕೊಂಕಣಿ ಭಾಷೆಯ ಕವಿತೆಗಳನ್ನು ಪ್ರಸ್ತುತ ಪಡಿಸುವರು.

ಸೆ.27ರಂದು ಪೂರ್ವಾಹ್ನ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಜರಗುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್. ಜಿ.ಸಿದ್ದರಾಮಯ್ಯ ವಹಿಸುವರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಮುಖ್ಯ ಅತಿಥಿಗಳಾಗಿದ್ದು, ಕವಿ ಜಯಂತ ಕಾಯ್ಕಿಣಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ದಸರಾ ವಿಶೇಷಾಧಿಕಾರಗಳೂ ಆಗಿರುವ ಮೈಸೂರು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News