×
Ad

ಮಂಗಳೂರು ತಾಪಂ ಸಭೆಯಲ್ಲಿ ‘ಆಧಾರ್’ ಸದ್ದು

Update: 2017-09-20 18:32 IST

ಮಂಗಳೂರು, ಸೆ.20: ದ.ಕ.ಜಿಪಂ ಸಭಾಂಗಣದಲ್ಲಿ ಬುಧವಾರ ಮಂಗಳೂರು ತಾ.ಪ.ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ತಾಪಂ 9ನೆ ಸಾಮಾನ್ಯ ಸಭೆಯಲ್ಲಿ ‘ಆಧಾರ್’ ಸದ್ದು ಮಾಡಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರು ಪ್ರಸ್ತಾಪಿಸಿ ಅಧಿಕಾರಿಗಳಿಂದ ಸ್ಪಷ್ಟಣೆ ಬಯಸಿದರು.

ನಗರದಲ್ಲಿ ಆಧಾರ್ ಕಾರ್ಡ್ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದಾರ್ ನೋಂದಣಿಗಾಗಿ ಟೋಕನ್ ಪಡೆದವರಿಗೆ 3 ತಿಂಗಳ ಬಳಿಕ ಬರಲು ಹೇಳಿದ್ದಾರೆ. ಈಗಾಗಲೇ ಆಧಾರ್ ನೋಂದಣಿ ಮಾಡಿದ ಕೆಲವರಿಗೆ 6 ತಿಂಗಳಾದರೂ ಕಾರ್ಡ್ ಬಂದಿಲ್ಲ. ಆಧಾರ್ ನಂಬರ್ ಇಲ್ಲದೆ ಕೃಷಿಕರು ಸರಕರಾದ ಸವಲತ್ತುಗಳಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಸದಸ್ಯರೊಬ್ಬರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ಪ್ರಭಾರ ತಹಶೀಲ್ದಾರ್ ಗುರುಪ್ರಸಾದ್ ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಜನತೆಗೆ ಸಿಗಬೇಕಾದ ಸವಲತ್ತನ್ನು ಸರಕಾರ ಸ್ಥಗಿತ ಮಾಡಿಲ್ಲ. ಅಂತಹ ಆದೇಶವೂ ಬಂದಿಲ್ಲ. ಕೃಷಿಕರು ಈ ಬಗ್ಗೆ ಗೊಂದಲಕ್ಕೊಳಗಾಗಬೇಕಿಲ್ಲ. ಆದರೆ ಆದಷ್ಟು ಬೇಗ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕಾದ್ದು ಅಗತ್ಯ ಎಂದರು.

ಆಧಾರ್ ನೋಂದಣಿ ಸಮಸ್ಯೆ ಎಲ್ಲೆಡೆ ಇದೆ. ಆದರೆ ಆಧಾರ್ ಇಲ್ಲದ ಕಾರಣದಿಂದಾಗಿ ಸವಲತ್ತನ್ನು ಸ್ಥಗಿತಗೊಳಿಸಲಾಗಿಲ್ಲ. ಈಗಾಗಲೇ ಹೋಬಳಿ, ನಾಡಕೇಂದ್ರದಲ್ಲಿಯೂ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮೊಬೈಲ್ ಕಿಟ್ ಮೂಲಕ ಗ್ರಾಪಂನಲ್ಲೂ ನೋಂದಣಿಯಾಗುತ್ತಿದೆ ಎಂದು ಗುರುಪ್ರಸಾದ್ ಹೇಳಿದರು.

ಸದಸ್ಯ ಶ್ರೀಧರ್ ನೀರುಮಾರ್ಗ ಮಾತನಾಡಿ ನೀರುಮಾರ್ಗ ವ್ಯಾಪ್ತಿಯಲ್ಲಿನ 70ಕ್ಕೂ ಅಧಿಕ ಮಂದಿ ಮೊಬೈಲ್ ಕಿಟ್ ಮೂಲಕ ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಈ ಇದೀಗ ಲ್ಯಾಪ್‌ಟಾಪ್ ಹಾಳಾದ ಕಾರಣಗಳನ್ನು ಏಜೆಂಟರು ನೀಡುತ್ತಿದ್ದಾರೆ. ಜನತೆ ಇದರಿಂದಾಗಿ ತೊಂದರೆ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈವರೆಗೆ ಖಾಸಗಿ ಏಜೆಂಟ್‌ಗಳ ಮೂಲಕ ನಡೆಯುತ್ತಿದ್ದ ಆಧಾರ್ ನೋಂದಣಿಯನ್ನು ಕೇಂದ್ರ ಸರಕಾರ ನಿಲ್ಲಿಸಿದೆ. ಈಗ ಸರಕಾರಿ ಸಂಸ್ಥೆಗಳ ಮೂಲಕವೇ ನಡೆಯುತ್ತಿದೆ.ಲೋಪವಾಗಬಾರದು ಎಂಬ ನೆಲೆಯಲ್ಲಿ ಸರಕಾರಿ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲೂ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಿದ್ದರಿಂದ ಸಮಸ್ಯೆಗೆ ಮುಕ್ತಿ ಸಿಗಬಹುದು ಎಂದು ತಹಶೀಲ್ದಾರ್ ಹೇಳಿದರು.

ಮಂಗಳೂರು ತಾಲೂಕಲ್ಲಿ ಹೊಸ ಆಧಾರ್ ಕೇಂದ್ರ ಮಂಜೂರು ಆಗಿದ್ದು, ಶೀಘ್ರ ಆರಂಭಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಹೆಚ್ಚಿನ ಮಂದಿ ಆಧಾರ್ ನೋಂದಾಯಿಸಿಕೊಳ್ಳಲು ಸಾಧ್ಯವಿದೆ ಎಂದು ಉಪತಹಶೀಲ್ದಾರ್ ಮಾಹಿತಿ ನೀಡಿದರು.

ಮಂಗಳೂರು ತಾಪಂ ಇಒ ಜಿ.ಸದಾನಂದ, ತಾಪಂ ಉಪಾಧ್ಯಕ್ಷೆ ಪೂರ್ಣಿಮಾ ಉಪಸ್ಥಿತರಿದ್ದರು.

2 ವರ್ಷದೊಳಗೆ ಮನೆಕಟ್ಟದಿದ್ದರೆ ಹಕ್ಕುಪತ್ರ ರದ್ದು

ಸರಕಾರಿ ಜಾಗದಲ್ಲಿ ವಾಸ್ತವ್ಯವಿದ್ದು, ಹಕ್ಕುಪತ್ರ ಪಡೆದುಕೊಂಡಿದ್ದರೆ 2 ವರ್ಷದೊಳಗೆ ಮನೆ ಕಟ್ಟಬೇಕು. ಒಂದು ವೇಳೆ ಹಕ್ಕುಪತ್ರ ಸಿಕ್ಕಿಯೂ 2 ವರ್ಷದೊಳಗೆ ಮನೆ ಕಟ್ಟದೆ, ಆ ಜಾಗದಲ್ಲಿ ಬೇರೆಯವರು ಮನೆಕಟ್ಟಿ 94ಸಿ ಅಡಿ ಅರ್ಜಿ ಸಲ್ಲಿಸಿದರೆ ಹಳೆಯ ಹಕ್ಕುಪತ್ರ ರದ್ದುಪಡಿಸಿ ಹೊಸ ಅರ್ಜಿದಾರರಿದೆ ಹಕ್ಕುಪತ್ರ ನೀಡಲು ಅವಕಾಶವಿದೆ ಎಂದು ಪ್ರಭಾರ ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ಘನತ್ಯಾಜ್ಯ ಘಟಕವಿಲ್ಲದ ಗ್ರಾಪಂ ಬರ್ಕಾಸ್ತು

ಪ್ರತಿ ಗ್ರಾಪಂಗಳು ಘನತ್ಯಾಜ್ಯ ವಿಲೇವಾರಿ ಘಟಕವನ್ನು ಕಡ್ಡಾಯವಾಗಿ ಹೊಂದಿರಬೇಕು. ಇದಕ್ಕಾಗಿ ಸೂಕ್ತ ಜಾಗವನ್ನು ಗುರುತಿಸಬೇಕು. ಒಂದುವೇಳೆ ಜಾಗದ ಸಮಸ್ಯೆಯಿದ್ದರೆ ಸಮೀಪದ ಗ್ರಾಪಂನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಘಟಕ ನಿರ್ಮಿಸಬೇಕು. ಘನತ್ಯಾಜ್ಯ ಘಟಕ ಹೊಂದಿಲ್ಲದ ಗ್ರಾಪಂನ್ನು ಬರ್ಕಾಸ್ತುಗೊಳಿಸಲು ಅವಕಾಶವಿದೆ ಎಂದು ಗುರುಪ್ರಸಾದ್ ಮಾಹಿತಿ ನೀಡಿದರು.

ಸೆ.23ರಂದು ಸಭೆ

ಸೆ.23ರಂದು ಪಿಡಿಒ, ತಾಪಂ ಇಒ ಅವರನ್ನು ಒಳಗೊಂಡಂತೆ ಸಭೆ ನಡೆಸಲಾಗುವುದು. ಸಭೆಯಲ್ಲಿ ನಿವೇಶನ ಹಸ್ತಾಂತರದಲ್ಲಿ ಆಗಿರುವ ತೊಡಕು, ಘನತ್ಯಾಜ್ಯ ವಿಲೇವಾರಿ ಸ್ಥಳ ನಿಗದಿ ಕುರಿತು, ಪಹಣಿಪತ್ರ ವಿಳಂಬ ಸೇರಿದಂತೆ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗುರುಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News