ಒಂದೇ ಕುಟುಂಬದ 14 ಕಳ್ಳರ ಬಂಧನ!

Update: 2017-09-20 13:39 GMT

ಹೊಸದಿಲ್ಲಿ, ಸೆ.20: ದಿಲ್ಲಿ ಮೆಟ್ರೋ ಪ್ರಯಾಣಿಕರನ್ನೇ ಗುರಿಯಾಗಿಸಿ ಹಣ ದೋಚುತ್ತಿದ್ದ ಒಂದೇ ಕುಟುಂಬದ 14 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಈ 14 ಜನರ ಗುರುತುಗಳನ್ನು ಪಡೆದ ನಂತರವೇ ಪೊಲೀಸರಿಗೆ ಇವರು ಒಂದೇ ಕುಟುಂಬದ ಸದಸ್ಯರು ಎನ್ನುವುದು ತಿಳಿದುಬಂದಿದೆ. ಬಂಧನಕ್ಕೂ ಮೊದಲು ಈ ತಂಡ 9 ಮೊಬೈಲ್ ಫೋನ್ ಗಳನ್ನು ದೋಚಿತ್ತು ಎನ್ನಲಾಗಿದೆ. ಇದರಲ್ಲಿ 5 ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಾಗಿದೆ.

“ಪುರುಷ ಪ್ರಯಾಣಿಕರನ್ನೇ ಗುರಿಯಾಗಿಸಿ ಈ ತಂಡ ಕಳ್ಳತನ ಮಾಡುತ್ತಿತ್ತು. ಮೆಟ್ರೋ ಪ್ರಯಾಣಿಕರಿಂದ ದಿನವೊಂದಕ್ಕೆ 20ರಿಂದ 25 ಮೊಬೈಲ್ ಫೋನ್ ಗಳನ್ನು ಕಳವು ಮಾಡುತ್ತಿದ್ದರು” ಎಂದು ಡಿಜಿಪಿ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಒಬ್ಬ ಪ್ರಯಾಣಿಕನಿಂದ ಮೊಬೈಲ್ ಕಳವುಗೈಯುವುದನ್ನು ದಿಲ್ಲಿ ಮೆಟ್ರೋ ಸ್ಟೇಶನ್ ನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಗಮನಿಸಿದ್ದರು. ಕೂಡಲೇ ದಾಳಿ ನಡೆಸಿ ಒಬ್ಬನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆರೋಪಿಯನ್ನು ಬಚ್ಚನ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ವಿಷ್ಣುಪುರ ಗ್ರಾಮದವನಾಗಿದ್ದಾನೆ. ಕದ್ದ ಮೊಬೈಲೊಂದನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ವಿಚಾರಣೆ ನಡೆಸಿದಾಗ ಸಿಂಗ್ ತನ್ನ ಸಹಚರರ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ, ನಂತರ ಅವರನ್ನು ಪಾರ್ಕೊಂದರಿಂದ ಬಂಧಿಸಲಾಗಿದೆ. ಬಂಧಿತರಲ್ಲಿ 8 ಮಂದಿ ವಯಸ್ಕರು ಹಾಗೂ 6 ಮಂದಿ ಅಪ್ರಾಪ್ತರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News