ಬಿ.ಸಿ.ರೋಡ್: ಸರ್ವೀಸ್ ರಸ್ತೆ ಕಾಮಗಾರಿಗೆ ಚಾಲನೆ

Update: 2017-09-20 13:46 GMT

ಬಂಟ್ವಾಳ, ಸೆ. 20: ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ಅಧಿಕೃತ ಚಾಲನೆ ನೀಡಿದರು.
ಇದಕ್ಕೂ ಮೊದಲು ರಸ್ತೆಯಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ರಾ.ಹೆ.ಪ್ರಾ. ಇಲಾಖೆಯ ಇಂಜಿನಿಯರ್ ಅಜಿತ್ ಅವರೊಂದಿಗೆ ಚರ್ಚಿಸಿ, ಅದರ ಪರಿಹಾರಕ್ಕೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳಿನ್, ಬಿ.ಸಿ.ರೋಡಿನ ಸಹಿತ ಜಿಲ್ಲೆಯ ವಿವಿಧ ಭಾಗಗಳ ಸರ್ವೀಸ್ ರಸ್ತೆಯ ಅಭಿವೃದ್ಧಿಗೆ 19 ಕೋಟಿ ರೂ.ನ ಪ್ರಸ್ತಾವಕ್ಕೆ ಕೇಂದ್ರ ಸರಕಾರವು ಮಂಜೂರಾತಿ ನೀಡಿದೆ. ಈ ಪೈಕಿ ಬಿ.ಸಿ.ರೋಡಿನ ಸುಮಾರು 550 ಮೀಟರ್ ಉದ್ದದ ಸರ್ವೀಸ್ ರಸ್ತೆಯ ಕಾಂಕ್ರೀಕರಣ ಕಾಮಗಾರಿ 1.72 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ಹೇಳಿದರು.

ಬಿಸ್ಸೆನ್ನೆಲ್, ಮೆಸ್ಕಾಂ ಇಲಾಖೆಯ ಸಮನ್ವಯತೆಯ ಕೊರತೆ ಹಾಗೂ ಕೆಲವೊಂದು ತಾಂತ್ರಿಕ ಅಡಚಣೆಯಿಂದ ಕಾಮಗಾರಿ ಸ್ವಲ್ಪ ಮಟ್ಟಿನ ವಿಳಂಬವಾಗಿದೆ ಎಂದ ಅವರು, ನಿಗದಿತ ಅವಧಿಯೊಳಗೆ ಗುಣಮಟ್ಟವನ್ನು ಕಾಪಾಡಿಕೊಂಡು ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸರ್ವೀಸ್ ರಸ್ತೆಯಲ್ಲಿ ಪರಿಹಾರ ಪಡೆದುಕೊಂಡು ಇನ್ನೂ ಕೂಡಾ ತೆರವು ಮಾಡದ ಸುಮಾರು 12 ಕಟ್ಟಡಗಳ ಸಹಿತ ಬಂಟ್ವಾಳ ಪುರಸಭೆಯು ರಾ.ಹೆ.ಗಳಲ್ಲಿ ನಿರ್ಮಿಸುತ್ತಿರುವ ನೂತನ ಬಸ್ ತಂಗುದಾಣವನ್ನು ತೆರವುಗೊಳಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾ.ಹೆ.ಪ್ರಾ. ಇಲಾಖೆಯೇ ಗುರುತಿಸಿದ ಸ್ಥಳದಲ್ಲಿ ಬಸ್ ತಂಗುದಾಣವನ್ನು ಸಂಸದರ ಅನುದಾನದಿಂದಲೇ ನಿರ್ಮಿಸಲಾಗುವುದು ಎಂದರು. 
ಬಹುದಿನದ ಬೇಡಿಕೆಯಾದ ಬಂಟ್ವಾಳ ವ್ಯಾಪ್ತಿಯ ನಾಲ್ಕು ಪ್ರಮುಖ ರಸ್ತೆಗಳಾದ ಬಿ.ಸಿ.ರೋಡಿನಿಂದ ಪೊಳಲಿ-ಕಟೀಲು ಮಾರ್ಗವಾಗಿ ಮುಲ್ಕಿ, ಮೆಲ್ಕಾರ್ ಜಂಕ್ಷನ್‍ನಿಂದ ಕೊಣಾಜೆ-ತೊಕ್ಕೊಟ್ಟು, ಸಿದ್ದಕಟ್ಟೆ-ಮೂಡುಬಿದಿರೆ, ಕಲ್ಲಡ್ಕ-ಚೆರ್ಕಳ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸಲ್ಲಿಸಿರವ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಇದರಲ್ಲಿ ಎರಡು ರಸ್ತೆಯನ್ನು ರಾ.ಹೆ.ಪ್ರಾ. ಹಾಗೂ ಇನ್ನೆರಡು ರಸ್ತೆಯ ಕಾಮಗಾರಿಗಳನ್ನು ಪಿಡಬ್ಲ್ಯೂಡಿ ಇಲಾಖೆ ನಿರ್ವಹಿಸಲಿದೆ ಎಂದು ಸಂಸದರು ಹೇಳಿದರು.

ಬಿ.ಸಿ.ರೋಡಿನಿಂದ ಅಡ್ಡಹೊಳೆಯವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಉಪ್ಪಿನಂಗಡಿಯಿಂದ ಅಡ್ಡಹೊಳೆಯವರೆಗಿನ ಕಂದಾಯ ಜಮೀನನ್ನು ಈಗಾಗಲೇ ಬಿಟ್ಟುಕೊಡಲಾಗಿದೆ. ಕಲ್ಲಡ್ಕ ಮೇಲ್ಸೆತುವೆಯ ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಅದೇ ರೀತಿ ಬಿ.ಸಿ.ರೋಡ್‍ನಿಂದ ಚಾರ್ಮಡಿ ಪ್ರಥಮ ಹಂತದ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.

ಸಾರ್ವಜನಿಕ ಶೌಚಾಲಯ, ಮಣ್ಣಿನ ಪರೀಕ್ಷಾ ಕೇಂದ್ರ ಹಾಗೂ ವಿಶ್ರಾಂತಿ ಕೊಠಡಿಯನ್ನು ನಿರ್ಮಾಣಕ್ಕೆ ಎಂಆರ್‍ಪಿಎಲ್ ಸಂಸ್ಥೆಯು 3 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು. ಇದಕ್ಕೆ ಬಿ.ಸಿರೋಡ್ ಪ್ರದೇಶವನ್ನು ಗುರುತಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಪುರಸಭೆಯಲ್ಲಿ ಜಮೀನು ಕೇಳಿದ್ದೇನೆ. ಜಮೀನು ಸಿಗದಿದ್ದರೆ ರಾ.ಹೆ. ಗುರುತಿಸಿದ ಜಾಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವದಾಸ್ ಶೆಟ್ಟಿ, ಗೋವಿಂದ ಪ್ರಭು, ಸುಲೋಚನಾ ಜಿ.ಕೆ. ಭಟ್, ರಾ.ಹೆ.ಪ್ರಾ. ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News