×
Ad

ಸೆ.30: ‘ರೈಸ್ ಅಪ್ ಗೇಮ್’ ಹೊಸ ಆ್ಯಪ್ ಅನಾವರಣ

Update: 2017-09-20 19:26 IST

ಮಂಗಳೂರು, ಸೆ.20: ನಗರದ ಎಕ್ಕೋಲೆಡ್ ಟೆಕ್ ಸೊಲ್ಯೂಶನ್ಸ್ ಕಂಪೆನಿಯು ರಚಿಸಿದ ಹೊಸ ಆ್ಯಪ್ ‘ರೈಸ್ ಅಪ್ ಗೇಮ್’ ಸೆ.30ರಂದು ಅನಾವರಣ ಗೊಳ್ಳಲಿದೆ ಎಂದು ಸಂಸ್ಥೆಯ ಸಿಇಒ ಹರೀಶ್ ನೀರ್‌ಮಾರ್ಗ ಹೇಳಿದರು.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಜೀವಕ್ಕೆ ಹಾನಿಯಾಗುವಂತಹ ಗೇಮ್ ಅಲ್ಲ. ಇದರಿಂದ ವ್ಯಕ್ತಿ ಅಥವಾ ಸಮಾಜಕ್ಕೆ ಹಾನಿ ಇಲ್ಲ. ಸಮಾಜದ ಮೇಲೆ ಇದು ಪರಿಣಾಮಕಾರಿ ಪ್ರಯೋಜನ ಬೀರಲಿದೆ ಎಂದರು.

ಬಳಕೆದಾರರಿಗೆ ಈ ಆ್ಯಪ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಇದರಲ್ಲಿ 30 ಸವಾಲುಗಳಿದ್ದು, 30 ದಿನಗಳವರೆಗೆ ಇದು ನಡೆಯುತ್ತದೆ. ಪ್ರತೀ ಸವಾಲುಗಳು ಕೂಡ ಅಸಕ್ತಿದಾಯಕವಾಗಿದೆ. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಆಟಗಾರರು ಸವಾಲವನ್ನು ಪೂರ್ಣಗೊಳಿಸಿ ಒಪ್ಪಿಸಿದಾಗ ಅದನ್ನು ನಮ್ಮ ತಂಡ ಪರೀಕ್ಷಿಸುತ್ತದೆ. 30 ಸವಾಲುಗಳನ್ನು 3 ಹಂತಗಳಲ್ಲಿ ಹಂಚಲಾಗಿದೆ. ಪ್ರತೀ ಹಂತದಲ್ಲಿ 10 ಪ್ರಶ್ನೆಗಳಿದ್ದು, 2 (ಲೈಫ್‌ಲೈನ್) ಜೀವದಾನವಿರುತ್ತದೆ. ಆಟಗಾರನಿಗೆ ಪ್ರಶ್ನೆ ಕಷ್ಟವೆನಿಸಿದರೆ ಒಂದು ಜೀವಾದಾನ ಉಪಯೋಗಿಸಿ ಆ ಪ್ರಶ್ನೆ ಬದಲಿಸಿಕೊಳ್ಳಬಹುದು. ಆದರೆ ಒಂದು ಹಂತದಲ್ಲಿರುವ ಜೀವನಾಧಾರ ಮತ್ತೊಂದು ಹಂತಕ್ಕೆ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಹರೀಶ್ ನೀರ್‌ಮಾರ್ಗ ಹೇಳಿದರು.

ಆಟದ ಕೊನೆಯಲ್ಲಿ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು. ಇದಕ್ಕೆ ಕನಿಷ್ಠ 25 ಅಥವಾ ಅದಕ್ಕಿಂತ ಹೆಚ್ಚು ಸವಾಲುಗಳಿಗೆ ಉತ್ತರಿಸಿರಬೇಕು. ತಂಡದ ಸವಾಲುಗಳು ಈ ರೀತಿ ಇರಲಿದೆ. 1. ಅನಾಥಾಶ್ರಮಕ್ಕೆ ಹೋಗಿ ನಿಮ್ಮ ಅಮೂಲ್ಯ ಸಮಯ ವ್ಯಯಿಸಿ ಚಿತ್ರ, ಚಿಕ್ಕ ವೀಡಿಯೋ ಮತ್ತು ಅದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಬರೆಯಬೇಕು, 2. ನಿಮ್ಮದೇ ವೀಡಿಯೋ ತೆಗೆಯಿರಿ ಮತ್ತು ನಿಮ್ಮ ಊರು ಯಾವುದೆಂದು ತಿಳಿಸಿ ಜೊತೆಗೆ 1 ನಿಮಿಷಗಳವರೆಗೆ ನಿಮ್ಮ ಊರಿಗೆ ಬಗ್ಗೆ ಎಲ್ಲಕ್ಕಿಂತ ಹೆಚ್ಚು ಏನು ಇಷ್ಟವೆಂದು ತಿಳಿಸಿ, 3. ಗರಿಷ್ಠ 1 ನಿಮಿಷದವರೆಗೆ ವೀಡಿಯೋ ತೆಗೆದು ನೀವು ಮಾಧ್ಯಮಗಳಿಗೆ ಹೇಗೆ ಸಹಾಯ ಮಾಡಬಹುದು ಎಂದು ತಿಳಿಸಬೇಕು, 4. ಭಾರತದ ಸೈನಿಕರನ್ನು ಹೊಗಳುತ್ತಾ 1 ನಿಮಿಷದ ಸ್ಪೂರ್ತಿದಾಯಕ ವೀಡಿಯೋ ಕಳಿಸಬೇಕು, 5. ನಿಮ್ಮ ಪಾಲಕರು/ ಆತ್ಮೀಯ ಸ್ನೇಹಿತರನ್ನು ಅಪ್ಪಿಕೊಂಡು ಎಲ್ಲರ ಮುಖದಲ್ಲಿಯೂ ನಗುವಿರುವ ಒಂದು ಚಿತ್ರ ಕಳುಹಿಸಬೇಕು. 6. ಶಿಕ್ಷಕರ ದಿನಾಚರಣೆಯ ಅಂಗವಾಗಿ 1 ನಿಮಿಷದ ವೀಡಿಯೋ ತೆಗೆದು ಕಳುಹಿಸಬೇಕು, 7. ನಿಮ್ಮ ಒಂದು ವೀಡಿಯೋ ತೆಗೆಯಿರಿ (1ರಿಂದ 3 ನಿಮಿಷ ಗರಿಷ್ಠ).

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಎಂ ಕಾಲೇಜಿನ ಪ್ರೊ. ಡಾನ್ ಪ್ರಕಾಶ್, ಶ್ರೀದೇವಿ ನೀರ್‌ಮಾರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News