ಕೋಲ್ಕತಾ: ನಟಿಯನ್ನು ಪೀಡಿಸಿದ ಇಬ್ಬರ ಬಂಧನ
Update: 2017-09-20 19:27 IST
ಕೋಲ್ಕತಾ, ಸೆ.20: ಬಂಗಾಲಿ ಚಿತ್ರನಟಿಯನ್ನು ಪೀಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿಯ ವೇಳೆ ಈ ಘಟನೆ ನಡೆದಿದೆ. ನಟಿ ಕಾಂಚನಾ ಮೊತ್ರ ಸಿನೆಮಾದ ಚಿತ್ರೀಕರಣ ಮುಗಿಸಿ ಮನೆಗೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಸಿರಿತಿ ಕ್ರಾಸಿಂಗ್ ಎಂಬಲ್ಲಿ ರಸ್ತೆ ಮಧ್ಯೆ ನಡೆದುಹೋಗುತ್ತಿದ್ದ ವ್ಯಕ್ತಿಗೆ ಸವರಿಕೊಂಡು ಹೋಗಿದೆ ಎನ್ನಲಾಗಿದೆ.ಈ ಸಂದರ್ಭ ಮದ್ಯದ ಅಮಲಿನಲ್ಲಿದ್ದ ಮೂವರು ವ್ಯಕ್ತಿಗಳು ಕಾರಿಗೆ ಅಡ್ಡನಿಂತು ಕಾರಿನ ಕೀಯನ್ನು ಕಸಿದುಕೊಂಡಿದ್ದಾರೆ. ಬಳಿಕ ನಟಿಯನ್ನು ಕಾರಿನಿಂದ ಹೊರಗೆಳೆದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ.
ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಮೂರನೇ ವ್ಯಕ್ತಿಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.