×
Ad

ದ.ಕ. ಜಿಲ್ಲೆಗೆ 3 ನೂತನ ಅಗ್ನಿಶಾಮಕ ಠಾಣೆ : ಗೃಹಸಚಿವ ರಾಮಲಿಂಗಾ ರೆಡ್ಡಿ

Update: 2017-09-20 19:46 IST

ಮೂಡುಬಿದಿರೆ,ಸೆ.20: ದ.ಕ. ಜಿಲ್ಲೆಯ ಮುಲ್ಕಿ, ಕಡಬ ಹಾಗೂ ಬಂಟ್ವಾಳದ ಕೈರಂಗಳದಲ್ಲಿ ಹೊಸ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಲು ರಾಜ್ಯ ಸರಕಾರ ಯೋಜಿಸಿದ್ದು ಇದಕ್ಕಾಗಿ ಸರ್ವೇಕಾರ್ಯಗಳು ನಡೆದಿವೆ. ರಾಜ್ಯದಲ್ಲಿ ಒಟ್ಟು 10 ಹೊಸ ಅಗ್ನಿಶಾಮಕ ಠಾಣೆಗಳ ಸ್ಥಾಪನೆಯ ಪ್ರಸ್ತಾವನೆಯ ಹಿನ್ನಲೆಯಲ್ಲಿ ಸರಕಾರ ಕಾರ್ಯನಿರತವಾಗಿದೆ ಎಂದು ರಾಜ್ಯ ಗೃಹಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಇಲ್ಲಿನ ಮಾರ್ಪಾಡಿ ಗ್ರಾಮದ ಕಡಲಕೆರೆ ಬಳಿ 3.32 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಅಗ್ನಿಶಾಮಕ ಠಾಣೆ ಹಾಗೂ ಸಿಬ್ಬಂದಿಗಳ ವಸತಿಗೃಹ ಕಟ್ಟಡಗಳನ್ನು ಬುಧವಾರ ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.  

ನೂತನ ತಾಲೂಕಾಗಿ ಘೋಷಣೆಯಾಗಿರುವ ಕಡಬ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ರಚನೆಗೆ ನಿವೇಶನ ಗುರುತಿಸಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ. ಮುಲ್ಕಿಯ ಕಾರ್ನಾಡು ಪರಿಸರದಲ್ಲಿ ನಿವೇಶನ ಗುರುತಿಸಲಾಗಿದ್ದು ಬಂಟ್ವಾಳದ ಕೈರಂಗಳದಲ್ಲಿ 2.5 ಎಕರೆ ಸ್ಥಳವನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ವತಿಯಿಂದ ಜಾಗ ಗೊತ್ತುಪಡಿಸಲಾಗಿದೆ ಎಂದರು. 

ಅಗ್ನಿಶಾಮಕ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಅವುಗಳು ತೆರಳುವ ಮಾರ್ಗಗಳಲ್ಲಿ ಟ್ರಾಫಿಕ್ ಅತಿಯಾಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸಚಿವರ ಗಮನ ಸೆಳೆದಾಗ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಕ್ರಮಕೈಗೊಳ್ಳಲಾಗುವುದು. ಟ್ರಾಫಿಕ್ ಠಾಣೆಯನ್ನು ಮೂಡುಬಿದಿರೆಯಲ್ಲಿ ರಚಿಸುವ ಬಗ್ಗೆ ಸ್ಥಳೀಯ ಗಣ್ಯರು, ಪತ್ರಕರ್ತರು ಹಾಗೂ ಪೊಲೀಸ್ ಇಲಾಖೆಯ ಜಂಟಿ ಸಭೆ ನಡೆಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಶಾಸಕ ಅಭಯಚಂದ್ರ ಅವರಿಗೆ ಸಚಿವರು ಸೂಚಿಸಿದರು. 

ಪೋಲೀಸ್ ಇಲಾಖೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಹೊಸ ವಾಹನಗಳು, ಹಾಗೂ ವಸತಿಗೃಹಗಳನ್ನು ನಿರ್ಮಿಸಲಾಗುತ್ತದೆ. ಸಿಬ್ಬಂದಿಗಳು ಅಧಿಕಾರಿಗಳಲ್ಲಿ ಶಿಸ್ತಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು. 

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ  ಯು. ಟಿ. ಖಾದರ್, ಶಾಸಕ ಕೆ. ಅಭಯಚಂದ್ರ ಜೈನ್, ಜಿಲ್ಲಾ ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿರ್ದೇಶಕ ಕೆ.ಯು. ರಮೇಶ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಜಿ. ತಿಪ್ಪೇಸ್ವಾಮಿ, ಮುಖ್ಯ ಅಗ್ನಿಶಾಮಕ ಅಧಿಕಾರಿ ಟಿ.ಎನ್ ಶಿವಶಂಕರ್, ಮೂಡುಬಿದಿರೆ ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್, ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್, ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್. ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೋ, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಯೋಜನಾ ಸಮಿತಿ  ಸದಸ್ಯ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News