×
Ad

ಸಖಿ ಒನ್ ಸ್ಟಾಪ್ ಸೆಂಟರ್ ಶೀಘ್ರ ಉದ್ಘಾಟನೆ: ಜಿಲ್ಲಾಧಿಕಾರಿ

Update: 2017-09-20 20:13 IST

ಉಡುಪಿ, ಸೆ.20: ಉಡುಪಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಖಿ ಒನ್ ಸ್ಟಾಪ್ ಸೆಂಟರ್ ಕಟ್ಟಡ ಕಾಮಗಾರಿಗಾಗಿ 37.68 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ವಿದ್ಯುದ್ದೀಕರಣ ಸೇರಿದಂತೆ ಸ್ವಲ್ಪ ಪ್ರಮಾಣದ ಕೆಲಸ ಬಾಕಿ ಇದ್ದು, ಈ ಕೆಲಸವನ್ನು ಶೀಘ್ರದಲ್ಲಿ ಮುಗಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಶೀಘ್ರವೇ ಕಟ್ಟಡ ಉದ್ಘಾಟನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ವಾಲ್ವಿಸ್‌ಗೆ ಸೂಚನೆ ಗಳನ್ನು ನೀಡಿದರು.

ಜಿಲ್ಲೆಯ ಮಹಿಳಾ ನಿಲಯದಲ್ಲಿರುವ ಹೊರ ರಾಜ್ಯದ ಮಹಿಳೆಯರ ವಿಳಾಸ ವನ್ನು ಪತ್ತೆ ಹಚ್ಚುವ ಕುರಿತಂತೆ, ಮಹಿಳೆಯರ ಸಂಬಂಧಪಟ್ಟ ರಾಜ್ಯದ ರಾಜಧಾನಿಗಳ ಪೊಲೀಸ್ ಕಂಟ್ರೋಲ್ ರೂಂಗಳಿಗೆ ಅವರ ಭಾವಚಿತ್ರ ಹಾಗೂ ಗುರುತಿನ ಚಹರೆಗಳನ್ನು ಕಳುಹಿಸಿ ಅವರ ವಿಳಾಸ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ಪ್ರಿಯಾಂಕ ನಿರ್ದೇಶನಗಳನ್ನು ನೀಡಿದರು.

ಮಹಿಳಾ ನಿಲಯದಲ್ಲಿರುವ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಅವರಿಂದ ಬಟ್ಟೆ ಬ್ಯಾಗ್‌ಗಳನ್ನು ತಯಾರಿಸುವ ಮೂಲಕ ಅವರಿಗೆ ದುಡಿದು ಸಂಪಾದಿಸಲು ಅವಕಾಶ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸ್ ಠಾಣೆಗಳಲ್ಲಿ ಶೀಘ್ರದಲ್ಲಿ ದಾಖಲಿಸುವಂತೆ ಹಾಗೂ ಎಫ್‌ಐಆರ್ ಪ್ರತಿ ಹಾಗೂ ವೈದ್ಯಕೀಯ ವರದಿಯ ಪ್ರತಿಯನ್ನು ಮಹಿಳಾ ಸಾಂತ್ವನ ಕೇಂದ್ರಗಳಿಗೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿ, ರಾಜ್ಯ ಅಥವಾ ಕೇಂದ್ರ ಸರಕಾರದ ನೌಕರಿಯಲ್ಲಿರುವ ಮಹಿಳೆಯರು ತಮ್ಮ ಮೇಲೆ ನಡೆದ ದೌರ್ಜನ್ಯ ಪ್ರಕರಣ ಗಳನ್ನು ನೇರವಾಗಿ ಸಂಬಂದಪಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು ಎಂದರು.

  ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಗಳ ಕುರಿತಂತೆ ಶಾಲಾ ಕಾಲೇಜುಗಳ ಪರಿಸರದಲ್ಲಿ ಪೊಲೀಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

 ಮಹಿಳಾ ಸಾಂತ್ವನ ಯೋಜನೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ, ವರದಕ್ಷಿಣೆ ನಿಷೇಧ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕ ತಡೆ ಸೇರಿದಂತೆ ಮಹಿಳೆ ಮತ್ತು ಮಕ್ಕಳ ವಿರುದ್ದ ನಡೆಯುವ ದೌರ್ಜನ್ಯ ತಡೆಗಟ್ಟುವ ಕುರಿತಂತೆ ಇರುವ ಕಾನೂನುಗಳು, ಅವುಗಳ ಅನುಷ್ಠಾನ ಕುರಿತಂತೆ, ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳು ಹಾಗೂ ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಪ್ರತ್ಯೇಕ ಕಾರ್ಯಗಾರವೊಂದನ್ನು ಏರ್ಪಡಿಸಿ, ಸವುಗ್ರ ಮಾಹಿತಿ ನೀಡುವಂತೆ ತಿಳಿಸಿದರು.

 ಜಿಲ್ಲೆಯಲ್ಲಿ ಏ.17ರಿಂದ ಇದುವರೆಗೆ ಸಾಂತ್ವನ ಯೋಜನೆಯ 379 ಪ್ರಕರಣಗಳಲ್ಲಿ 115 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 236 ಸಮಾಲೋಚನೆಯ ಹಂತದಲ್ಲಿವೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ 208 ಪ್ರಕರಣ ದಾಖಲಾಗಿದ್ದು, 180 ಇತ್ಯರ್ಥ ಪಡಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆಯಡಿ ಒಂದು ಪ್ರಕರಣ ದಾಖಲಾ ಗಿದ್ದು, ತನಿಖಾ ಹಂತದಲ್ಲಿದೆ. ಸ್ಥೈರ್ಯ ನಿಧಿ ಯೋಜನೆಯಲ್ಲಿ 6 ಪ್ರಕರಣಗಳಿಗೆ 1.50 ಲಕ್ಷ ರೂ. ತುರ್ತು ಪರಿಹಾರ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ವಾಲ್ವಿಸ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News