ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿಬಿಎಸ್‌ಇ ಆರಂಭ

Update: 2017-09-20 17:22 GMT

ಮಂಗಳೂರು, ಸೆ. 20: ನಗರದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಅಧೀನದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇಯಾಗಿ ಪ್ರಾರಂಭಗೊಂಡಿದೆ. ಇದರ ಅಧಿಕೃತ ಉದ್ಘಾಟನೆಯು ಸೆ. 25ರಂದು ನಡೆಯಲಿದೆ ಎಂದು ಆಡಳಿತಾಧಿಕಾರಿ ವಂ.ಮೈಕಲ್ ಸಾಂತುಮಾಯರ್ ತಿಳಿಸಿದ್ದಾರೆ.

 ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಮೇ ತಿಂಗಳಲ್ಲಿ ದೆಹಲಿಯ ಕೇಂದ್ರೀಯ ಶಿಕ್ಷಣ ಮಂಡಳಿಯಿಂದ ಮಾನ್ಯತೆ ದೊರೆತಿದ್ದು, ಈ ವರ್ಷದ ಜೂನ್ ತಿಂಗಳಿಂದ ಶಾಲಾ ಮಕ್ಕಳಿಗೆ ಕೇಂದ್ರೀಯ ಪಠ್ಯಕ್ರಮವನ್ನು ಅಳವಡಿಸಲಾಗಿದೆ ಎಂದರು.

ಕೇಂದ್ರೀಯ ಪಠ್ಯಕ್ರಮ ಅಳವಡಿಸುವ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಂದ ಕೇಳಿ ಬರುತ್ತಿದ್ದ ಒತ್ತಾಯ ಹಾಗೂ ಸಂಸ್ಥೆ ಅಳವಡಿಸಿಕೊಂಡಿದ್ದ ರಾಜ್ಯ ಪಠ್ಯಕ್ರಮದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು ಕೇಂದ್ರೀಯ ಪಠ್ಯಕ್ರಮವನ್ನು ಅಳವಡಿಸುವ ನಿರ್ಧಾರಕ್ಕೆ ಬಂದಿದೆ ಎಂದು ವಂ.ಮೈಕಲ್ ಸಾಂತುಮಾಯರ್ ತಿಳಿಸಿದರು.

ಮಿಲಾಗ್ರಿಸ್ ಶಾಲೆಯು ಮಂಗಳೂರಿನ ಕೆಥೊಲಿಕ್ ಶಿಕ್ಷಣ ಮಂಡಳಿಯ ಒಂದು ಘಟಕವಾಗಿದ್ದು, ಮಿಲಾಗ್ರಿಸ್ ಚರ್ಚ್‌ನ ಸ್ಥಳೀಯ ಆಡಳಿತಕ್ಕೊಳಪಟ್ಟಿದೆ. ಶಾಲೆಯು ಅತ್ಯಾಧುನಿಕ ಹಾಗೂ ಅಧ್ಯಯನಕ್ಕೆ ಪೂರಕವಾದ ಸೌಕರ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಸುಸಜ್ಜಿತ ತರಗತಿಗಳು, ಸುಸಜ್ಜಿತ ಗ್ರಂಥಾಲಯ, ಗಣಿತ, ವಿಜ್ಞಾನ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್, ಪ್ರತಿ ತರಗತಿಯಲ್ಲೂ ಆಧುನಿಕ ಶಿಕ್ಷಣ ತಂತ್ರಜ್ಞಾನಗಳನ್ನೊಳಗೊಂಡ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನೂ ಅಳವಡಿಸಿಕೊಂಡಿದೆ ಎಂದವರು ವಿವರಿಸಿದರು.

25ರಂದು ಉದ್ಘಾಟನೆ

ಮಿಲಾಗ್ರಿಸ್ ಸಿಬಿಎಸ್‌ಇ ಶಾಲೆಯ ಉದ್ಘಾಟನೆಯು ಸೆ.25ರಂದು ಬೆಳಗ್ಗೆ 10 ಗಂಟೆಗೆ ಮಿಲಾಗ್ರಿಸ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಅತಿ ವಂ. ಡಾ.ಅಲೋಶಿಯಸ್ ಪೌಲ್ ಡಿಸೋಜಾ ಉದ್ಘಾಟೆಯನ್ನು ನೆರವೇರಿಸಲಿದ್ದಾರೆ. ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ವಿಧಾನ ಪರಿಷತ್‌ನ ವಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಜೆ.ಆರ್.ಲೋಬೊ, ಸಿಬಿಇ ಕಾರ್ಯದರ್ಶಿ ವಂ.ಜೆರಾಲ್ಡ್ ಡಿಸೋಜಾ, ಕಾರ್ಪೊರೇಟರ್ ವಿನಯ್‌ರಾಜ್, ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ.ಮಾಥ್ಯು ಸಿ.ನಿನನ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ವಂ.ವೆಲೇರಿಯನ್ ಡಿಸೋಜಾ, ಸಿಬಿಎಸ್‌ಇ ಮಾರ್ಗದರ್ಶಕರಾಗಿ ಪ್ರತಿಭಾ ನೇಮಿರಾಜ್, ಪ್ರಾಂಶುಪಾಲರಾಗಿ ಎಲ್ವಿರಾ ಲಸ್ರಾದೊರ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News