×
Ad

ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಗೊಂದಲ

Update: 2017-09-20 21:04 IST

ಕುಂದಾಪುರ, ಸೆ.20: ಮುಂದಿನ ವಿಧಾನಸಭಾ ಚುನಾವಣೆಗೆ ಕುಂದಾಪುರ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರಗಳಲ್ಲಿ ಈವರೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದೆ ಇರುವುದರಿಂದ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯು ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಹೇಳಿದ್ದಾರೆ.

‘ಮುಂದಿನ ಚುನಾವಣೆಯಲ್ಲಿ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಸೆ.19ರಂದು ಕುಂದಾಪುರದಲ್ಲಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಇಂದು ಕುಂದಾಪುರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕಿಶೋರ್ ಕುಮಾರ್ ಈ ವಿಷಯ ತಿಳಿಸಿದರು.

ಪಕ್ಷದಲ್ಲಿ ಹಲವು ಸಮಿತಿಗಳಿದ್ದು, ಸಂಘಪರಿವಾರ ಕೂಡ ಕೆಲಸ ಮಾಡುತ್ತಿದೆ. ಇವರೆಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದ ಅವರು, ಕೆಲ ದಿನಗಳ ಹಿಂದೆ ಹಾಲಾಡಿ ಶ್ರೀನಿವಾಸ ಶೆಟ್ಟಿ ನಾನು ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಹಾಲಾಡಿ ಕುಂದಾಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಾಡಿ ಎದುರು ಸ್ಪರ್ಧಿಸಿ ಸೋತ ಕಿಶೋರ್‌ಕುಮಾರ್ ತಿಳಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಇರುವಂತೆ ಒಂದಿಷ್ಟು ಗೊಂದಲಗಳು ಕುಂದಾಪುರ ಕ್ಷೇತ್ರದಲ್ಲಿಯೂ ಇವೆ. ಇವುಗಳನ್ನು ಸರಿಪಡಿಸುವ ಕೆಲಸವನ್ನು ಪಕ್ಷದ ಮುಖಂಡರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಹಿಂದೆ ಮಾಡಿದ ರೀತಿಯಲ್ಲಿ ಗುಂಪುಗಾರಿಕೆ ಮಾಡಿದರೆ ಅವರಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕ ಮೇರ್ಡಿ ಸತೀಶ ಹೆಗ್ಡೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ ಕಾವೇರಿ, ಶಂಕರ ಅಂಕದಟ್ಟೆ, ಗಣೇಶ ಭಟ್, ಉದಯ ಮೆಂಡನ್, ಮಹೇಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News