ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕದಡದಂತೆ ಕಟ್ಟು ನಿಟ್ಟಿನ ಕ್ರಮ: ರಾಮಲಿಂಗ ರೆಡ್ಡಿ

Update: 2017-09-20 15:52 GMT

ಮಂಗಳೂರು.ಸೆ,20: ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕದಡದಂತೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈ ಗೊಳ್ಳುವಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ರಾಜ್ಯದ ಗೃಹ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಅವರು ಇಂದು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಗೆ ಹಿಂದೆ ಹಲವು ಬಾರಿ ಭೇಟಿ ನೀಡಿದ್ದೇನೆ ಗೃಹ ಸಚಿವನಾದ ಬಳಿಕ ಪ್ರಥಮ ಬಾರಿಗೆ ಭೇಟಿ ನೀಡುತ್ತಿದ್ದೇನೆ.ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ಮನವಿಯನ್ನು ಗಮನಿಸಿರುವುದಾಗಿ ತಿಳಿಸಿದ ಸಚಿವರು ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿದೆ.ದೀನ,ದಲಿತರ ,ಬಡವರ ಬಗ್ಗೆ ನಿಜವಾದ ಕಾಳಜಿಯಿಂದ ಕಾರ್ಯನಿರ್ವಹಿಸಿ ಎಲ್ಲಾ ಜಾತಿ,ಧರ್ಮದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ.ಕಾಂಗ್ರೆಸ್ ಈ ದೇಶದ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಇತಿಹಾಸವನ್ನು ಹೊಂದಿರುವ ಪಕ್ಷ.ಆದರೆ ಬಿಜೆಪಿ ಸ್ವಾತಂತ್ರ ಹೋರಾಟದಲ್ಲೂ ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಚರಿತ್ರೆ ಹೊಂದಿಲ್ಲ.ಸುಳ್ಳುಗಳನ್ನು ಹೇಳಿ ಅಧಿಕಾರ ಪಡೆದುಕೊಂಡಿರುವ ಪಕ್ಷವಾಗಿದೆ ಎಂದು ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿಯ ಕೋಮುವಾದಿ ತಂತ್ರಗಳಿಗೆ ಕಾಂಗ್ರೆಸ್ ಮಣಿಯುವುದಿಲ್ಲ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಕೋಮುವಾದಿ ತಂತ್ರಗಳಿಗೆ ಕಾಂಗ್ರೆಸ್ ಮಣಿಯುವುದಿಲ್ಲ.ಬಿಜೆಪಿಯ ಈ ಧೋರಣೆಯನ್ನು ಸಮರ್ಥವಾಗಿ ಕಾಂಗ್ರೆಸ್ ಕಾರ್ಯಕರ್ತರು ಎದುರಿಸಬೇಕಾಗಿದೆ.ಕಾಂಗ್ರೆಸ್ ಪಕ್ಷದ ಒಳಗೆ ಯಾವೂದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನೆಲ್ಲಾ ಮೀರಿ ಎಲ್ಲಾ ಜಾತಿ,ಮತ,ಧರ್ಮ,ಭಾಷೆಯ ಜನರು ಒಗ್ಗಟ್ಟಿನಿಂದ,ಶಾಂತಿ ಸೌರ್ಹಾದತೆಯಿಂದ ಬದುಕಬೇಕು ಎಂದು ಬಯಸುವ ಪಕ್ಷವಾಗಿ ಈ ದೇಶದಲ್ಲಿ ಬೆಳೆದು ಬಂದ ಇತಿಹಾಸವನ್ನು ಹೊಂದಿದೆ.

ದೇಶದಲ್ಲಿ ಇಂದಿರಾಗಾಂಧಿಯಿಂದ ಆರಂಭಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಯೋಜನೆಗಳು ,ರಾಜೀವ ಗಾಂಧಿ,ಮನಮೋಹನ್ ಸಿಂಗ್ ವರೆಗೆ ಈ ದೇಶದ ಕೋಟ್ಯಾಂತರ ಬಡವರಿಗೆ ಬೆಳಕು ನೀಡಿದೆ,ಮನೆ ನಿರ್ಮಿಸಲು ಸಹಾಯ ಮಾಡಿದೆ ಭೂಮಿಯ ಹಕ್ಕು ಪಡೆಯಲು ಸಾಧ್ಯವಾಗುವಂತೆ ಮಾಡಿದೆ.ಸ್ವಾವಲಂಬಿಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ. ಮನಮೋಹನ್ ಸಿಂಗ್‌ರ ನೇತೃತ್ವದಲ್ಲಿ ಈ ದೇಶ ಆರ್ಥಿಕ ಪ್ರಗತಿಯಲ್ಲಿ ಸ್ಥಿರತೆಯನ್ನು ಕಾಣುವಂತಾಯಿತು.ಮುಂದೆ ಸೋನಿಯಾ ಗಾಂಧಿಯ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ದೇಶದ ಚುಕ್ಕಾಣಿ ಹಿಡಿಯುವ ವಾತವರಣ ನಿರ್ಮಾಣವಾಗುತ್ತಿದೆ.

ಬಿಜೆಪಿ ವಿವಿಧ ಯೋಜನೆಗಳ ಬಣ್ಣ ಬಯಲಾಗಿದೆ.ನಿಜ ಸಂಗತಿ ಏನು ಎನ್ನುವುದು ದೇಶದ ಜನಸಾಮಾನ್ಯರಿಗೂ ಅರಿವಾಗತೊಡಗಿದೆ.ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ,ಜನರ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.ಈ ಸಂಗತಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಗಮನಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ರಮಾನಾಥ ರೈ ತಿಳಿಸಿದರು.ಜಿಲ್ಲೆಯಲ್ಲಿ ಶಾಂತಿಗಾಗಿ ಮಾಣಿಯಿಂದ ಪರಂಗಿಪೇಟೆಯ ವರಗೆ ಶೀಘ್ರದಲ್ಲಿ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂತಾಪ:-ರಾಜ್ಯದ ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.ಸಭೆಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು.ಸಭೆಯಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್,ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ಹಿರಿಯ ಕಾಂಗ್ರೆಸ್ ಮುಖಂಡ ಕೋಡಿಜಾಲ್ ಇಬ್ರಾಹೀಂ,ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಶಶಿಧರ ಹೆಗ್ಡೆ,ಮಮತಾ ಗಟ್ಟಿ,ಶಾಹುಲ್ ಹಮೀದ್,ಶಾಲೆಟ್ ಪಿಂಟೋ, ಅಶ್ರಫ್,ಎನ್.ಎಸ್.ಕರೀಂ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಜೊತೆ ಕಾರ್ಯಕರ್ತರ ಮಾತಿನ ಚಕಮಕಿ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಚಿವ ರಾಮಲಿಂಗ ರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ವಿಜಯ ಕುಮಾರ್ ಶೆಟ್ಟಿಯವರು ವೇದಿಕೆಯಲ್ಲಿ ಆಸೀನರಾಗಿದ್ದರು.ಸಚಿವರು ಕಾರ್ಯಕ್ರಮ ಮುಗಿದು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚೆಗೆ ವಿಜಯ ಕುಮಾರ್ ಶೆಟ್ಟಿಯವರು ಕಾಂಗ್ರೆಸ್ ಮುಖಂಡರ ವಿರುದ್ಧ ಆರೋಪ ಮಾಡಿ ಹೇಳಿಕೆ ನೀಡಿರುವುದನ್ನು ಆಕ್ಷೇಪಿಸಿ ವಿಜಯ ಕುಮಾರ್ ಶೆಟ್ಟಿಯವರ ಜೊತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News