ಕಾರಂತ್‌ರ ಕೋಮು ಉದ್ರೇಕ ಭಾಷಣ : ಪೊಲೀಸ್ ಇಲಾಖೆಯ ಮೌನಕ್ಕೆ ಡಿಎಸ್‌ಎಸ್ ಖಂಡನೆ
ಮಂಗಳೂರು, ಸೆ. 20: ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಂದಿಸಿ, ಬೆದರಿಕೆ ಒಡ್ಡಿದ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ವಿರುದ್ಧ ಪೊಲೀಸ್ ಇಲಾಖೆ ಮೌನ ವಹಿಸಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡನೆ ವ್ಯಕ್ತಪಡಿಸಿದೆ.
1998ರಲ್ಲಿ ಜಗದೀಶ ಕಾರಂತ್ ಅವರು ಸುರತ್ಕಲ್‌ನಲ್ಲಿ ಉದ್ರೇಕಕಾರಿಯಾಗಿ ಭಾಷಣ ಮಾಡಿ, ಸುರತ್ಕಲ್‌ನಲ್ಲಿ ಕೋಮು ಗಲಭೆ ನಡೆದು ಅಮಾಯಕ ಜೀವಗಳು ಬಲಿ ಪಡೆದುಕೊಂಡಿದ್ದವು. ಇದೀಗ ಕಾರಂತ್ ಅವರು ಮತ್ತೊಮ್ಮೆ ಕೋಮು ಪ್ರಚೋದನಕಾರಿಯಾಗಿ ಮಾತನಾಡಿ ಕೋಮು ಗಲಭೆಗೆ ಸಂಚು ರೂಪಿಸಿದಂತಿದೆ ಎಂದು ಸಮಿತಿಯ ದ.ಕ. ಜಿಲ್ಲಾ ಸಂಚಾಲಕ ರಘು ಕೆ.ಎಕ್ಕಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಘಪರಿವಾರದ ಶಕ್ತಿಗಳು ಪೊಲೀಸರ ಮೇಲೆಯೇ ನೇರ ದಾಳಿ ಮಾಡುತ್ತಿದ್ದರೂ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಪೊಲೀಸರ ಮನೋಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. ಪತ್ರಕರ್ತರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸುವ ಜಿಲ್ಲಾ ಪೊಲೀಸ್ ಇಲಾಖೆ ಜಗದೀಶ್ ಕಾರಂತರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲು ವಿಳಂಬ ಮಾಡುತ್ತಿರುವುದನ್ನು ಗಮನಿಸಿದರೆ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯ ಮೂಲಭೂತವಾದಿ ಶಕ್ತಿಗಳಿಗೆ ಮಣಿದಿದೆಯೇ? ಎಂಬ ಸಂದೇಹ ವ್ಯಕ್ತವಾಗುತ್ತಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಪೊಲೀಸ್ ಇಲಾಖೆಯು ಕಾರಂತರ ವಿರುದ್ಧ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಿ ಜಿಲ್ಲೆಯ ಕೋಮು ಸಾಮರಸ್ಯವನ್ನು ಕಾಪಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.