ಪ್ರಥಮ ವಿಶ್ವಯುದ್ದದಲ್ಲಿ ಮುಳುಗಡೆಯಾದ ಜರ್ಮನಿಯ ಸಬ್‌ಮೆರಿನ್ ಅವಶೇಷ ಪತ್ತೆ

Update: 2017-09-20 16:32 GMT

ಬ್ರಸೆಲ್ಸ್, ಸೆ.20: ಪ್ರಥಮ ವಿಶ್ವಯುದ್ದದಲ್ಲಿ ಮುಳುಗಡೆಯಾದ ಜರ್ಮನ್ ಸಬ್‌ಮೆರೀನ್‌ನ ಅವಶೇಷವನ್ನು ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲಿರುವ ‘ನಾರ್ತ್ ಸೀ’ಯಲ್ಲಿ ಮುಳುಗುಗಾರರು ಪತ್ತೆಹಚ್ಚಿದ್ದು, ಅವಶೇಷದೊಳಗೆ ಹಡಗಿನ ಸಿಬ್ಬಂದಿಗಳ ಮೃತದೇಹ ಇರುವ ಸಾಧ್ಯತೆ ಇದೆ ಎಂದು ಬೆಲ್ಜಿಯಂನ ಅಧಿಕಾರಿಗಳು ತಿಳಿಸಿದ್ದಾರೆ.

 ಆಸ್ಟೆಂಡ್ ಬಂದರಿನ ಸುಮಾರು 30 ಮೀಟರ್ ದೂರದ ಸಮುದ್ರದ ನೀರಿನಲ್ಲಿ ಸಬ್‌ಮೆರಿನ್ ಅವಶೇಷವನ್ನು ಮುಳುಗುದಾರನೋರ್ವ ಪತ್ತೆಹಚ್ಚಿದ್ದು ಸಬ್‌ಮೆರಿನ್‌ನ ಅವಶೇಷ ಇನ್ನೂ ಉತ್ತಮ ಸ್ಥಿತಿಯಲ್ಲಿರುವ ಕಾರಣ ಅದರೊಳಗೆ ಮೃತಪಟ್ಟಿರುವ 23 ಸಿಬ್ಬಂದಿಗಳ ಮೃತದೇಹ ಇರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

 1914ರಿಂದ 18ರವರೆಗೆ ನಡೆದಿದ್ದ ವಿಶ್ವಯುದ್ದದಲ್ಲಿ ಮುಳುಗಡೆಯಾಗಿರುವ ಜರ್ಮನ್ ಸಬ್‌ಮೆರಿನ್‌ಗಳ ಪೈಕಿ ಪತ್ತೆಯಾಗಿರುವ 11ನೇ ಸಬ್‌ಮೆರಿನ್ ಇದಾಗಿದೆ ಎಂದು ಮುಳುಗುತಜ್ಞ ಥೋಮಸ್ ಟೆರ್ಮೋಟ್ ತಿಳಿಸಿದ್ದಾರೆ. ನಿಧಿ ಶೋಧಕರು ಲಗ್ಗೆ ಇಡುವ ಸಾಧ್ಯತೆಯ ಕಾರಣ ಈ ನೌಕೆ ಇರುವ ನಿರ್ದಿಷ್ಟ ಸ್ಥಳವನ್ನು ಗುಪ್ತವಾಗಿರಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಯುಬಿ- 2 ವಿಭಾಗಕ್ಕೆ ಸೇರಿದ ವಿಧ್ವಂಸಕ ನೌಕೆ ಇದಾಗಿದ್ದು 27 ಮೀಟರ್ ಉದ್ದವಿದೆ. ಸಬ್‌ಮೆರಿನ್ ಅತ್ಯಂತ ಸುಸ್ಥಿತಿಯಲ್ಲಿದೆ ಎಂದು ಬೆಲ್ಜಿಯಂನ ಫ್ಲಾಂಡರ್ಸ್ ಮೆರೈನ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಜೇನ್ ಮೀಸ್ ತಿಳಿಸಿದ್ದಾರೆ.

ಈ ಸಬ್‌ವೆುರೀನ್‌ನಲ್ಲಿ ಓರ್ವ ಕಮಾಂಡರ್ ಹಾಗೂ 22 ಸಿಬ್ಬಂದಿಗಳು ಇದ್ದಿರಬಹುದು. ಈ ಕುರಿತು ಬೆಲ್ಜಿಯಂನಲ್ಲಿರುವ ಜರ್ಮನ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

  ಪ್ರಥಮ ಮಹಾಯುದ್ದದ ಸಂದರ್ಭ ಬೆಲ್ಜಿಯಂನ ಝೀಬ್ರಗ್ ಬಂದರನ್ನು ಜರ್ಮನಿ ತನ್ನ ಸಬ್‌ಮೆರಿನ್‌ಗಳ ನೆಲೆಯಾಗಿ ಪರಿವರ್ತಿಸಿಕೊಂಡಿತ್ತು ಮತ್ತು ಈ ನೆಲೆಯಿಂದ ಸಮುದ್ರದಲ್ಲಿ ಸಂಚರಿಸುವ ನೌಕೆಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ಸಬ್‌ಮೆರಿನ್ ಪಡೆಗಳಿಗೆ ‘ಯು ಬೋಟ್’ ಎಂಬ ಸಂಕೇತ ಪದವಿದ್ದು , ಯು-ಬೋಟ್‌ಗಳ ಬೆದರಿಕೆಯನ್ನು ಹತ್ತಿಕ್ಕಲು , 1918ರ ಎಪ್ರಿಲ್‌ನಲ್ಲಿ ಬ್ರಿಟಿಷರು ಮುಂದಾಗಿದ್ದು, ಬಂದರಿನ ಪ್ರವೇಶ ದ್ವಾರದಲ್ಲಿ ಹಳೆಯ ನೌಕೆಗಳನ್ನು ತಂದು ನಿಲ್ಲಿಸಿದ್ದರು.

 ಪ್ರಥಮ ಮಹಾಯುದ್ದದಲ್ಲಿ ಬೆಲ್ಜಿಯಂ ಕಡಲತೀರದಿಂದ ಕಾರ್ಯಾಚರಿಸುವ 70 ‘ಯು-ಬೋಟ್’ಗಳನ್ನು ಜರ್ಮನಿ ಕಳೆದುಕೊಂಡಿತ್ತು ಮತ್ತು ಇದರಲ್ಲಿದ್ದ ಸುಮಾರು 1,200 ಸಿಬ್ಬಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News