ಏಶ್ಯಾದ ಬಾಹ್ಯಾಕಾಶದಲ್ಲಿ ‘ಏರೋಸೆಲ್’
ಬೆಂಗಳೂರು, ಸೆ. 20: ಏಶ್ಯಾ ವಲಯದ ಆಕಾಶದಲ್ಲಿ ಏರೋಸೋಲ್ ಇರುವುದನ್ನು ಉಪಗ್ರಹ ಚಿತ್ರ ತೋರಿಸಿದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಹಾಗೂ ಅಮೆರಿಕದ ರಾಷ್ಟ್ರೀಯ ಏರೋನಾಟಿಕಲ್ ಹಾಗೂ ಬಾಹ್ಯಾಕಾಶ ನಿರ್ವಹಣೆ (ನಾಸಾ) ಜಂಟಿಯಾಗಿ ಈ ಬಗ್ಗೆ ಅಧ್ಯಯನ ನಡೆಸಿದ್ದು, ಏರೋಸೋಲ್ ಪದರಗಳು ಇರುವುದನ್ನು ದೃಢಪಡಿಸಿದೆ ಹಾಗೂ ನೈಟ್ರೇಟ್ ಕೂಡ ಇರುವುದನ್ನು ಪತ್ತೆ ಹಚ್ಚಿದೆ.
ಜ್ವಾಲಾಮುಖಿ ಸ್ಫೋಟ, ಗಾಳಿ ಬೀಸುವಿಕೆಯಿಂದ ಉತ್ಪತ್ತಿಯಾಗುವ ಧೂಳು, ಉರಿದ ತ್ಯಾಜ್ಯ, ವಾಹನಗಳ ಹೊಗೆ ಉಗುಳುವಿಕೆಯಂತಹ ಮಾನವ ನಿರ್ಮಿತ ಹಾಗೂ ನೈಸರ್ಗಿಕ ವಿವಿಧ ಪ್ರಕ್ರಿಯೆಯಿಂದ ಉಪ ಮೈಕ್ರೋನ್ ಗಾತ್ರದ ಏರೋಸೋಲ್ ಕಣಗಳು ಗಾಳಿಯಲ್ಲಿ ನೇತಾಡುತ್ತಿರುತ್ತವೆ. ಇದು ಭೂಮಿಯ ಮೇಲ್ಮೈಯ ವಾತಾವರಣದಿಂದ ಕೆಲವು ಕಿಲೋ ಮೀಟರ್ ಒಳಗಡೆ ಇರುತ್ತದೆ.
ಏಶ್ಯಾ ವಲಯದ ಮೇಲೆ ಉಪಗ್ರಹ ಮಾಪನದಲ್ಲಿ ಕಂಡು ಬಂದ ಏರೋಸೋಲ್ ಪದರ ಇರುವಿಕೆಯನ್ನು ಜಂಟಿ ತಂಡ ಮಾಪನ ಮಾಡಿದೆ ಹಾಗೂ 16.5-18.5 ಕಿ.ಮೀ. (ಭೂಮಿಯ ಮೇಲ್ಮೈಯಿಂದ) ಸಮೀಪ ಕೇಂದ್ರೀಕೃತವಾಗಿರುವ ಏರೋಸೋಲ್‌ನಲ್ಲಿ ತೀವ್ರ ಏರಿಕೆಯಾಗುತ್ತಿರುವುದನ್ನು ಅದು ತೋರಿಸಿದೆ ಎಂದು ಇಸ್ರೋ ಹೇಳಿದೆ. ಈ ಪದರ 0.5 ಮೈಕ್ರೋನ್ ಗಾತ್ರಕ್ಕಿಂತ ಕಡಿಮೆ ಇರುವ ಕಣಗಳನ್ನು ಒಳಗೊಂಡಿದೆ ಹಾಗೂ ಇದು ಆವಿಯಾಗುವಂತದ್ದು ಎಂದು ಇಸ್ರೋ ತಿಳಿಸಿದೆ.
ಏನಿದು ಏರೋಸೋಲ್
ಅನಿಲದಲ್ಲಿ ತೊಯ್ದಾಡಿಕೊಂಡಿರುವ ಘನ ಅಥವಾ ದ್ರವ ಪುಟ್ಟ ಕಣಗಳ ಸಂಗ್ರಹ ಏರೋಸೋಲ್. ಇದು ಸಾಮಾನ್ಯವಾಗಿ 0.001ರಿಂದ 100 ಮೈಕ್ರೂನ್ ಗಾತ್ರ ಇರುತ್ತದೆ. ಹೇರ್ ಸ್ಪ್ರೇ, ಫರ್ನಿಚರ್ ಪಾಲಿಶ್ ಸ್ಪ್ರೇ ಪೈಂಟ್ ಹಾಗೂ ಇತರ ಹಲವು ಉಪಯೋಗಳಲ್ಲಿ ಇದನ್ನು ಬಳಸಲಾಗುತ್ತದೆ.