“ಭೀಕರ ಪರಮಾಣು ದಾಳಿ ನಡೆಸಿ ಸರ್ವನಾಶ ಮಾಡುತ್ತೇವೆ”

Update: 2017-09-20 18:17 GMT

ವಾಶಿಂಗ್ಟನ್, ಸೆ. 20: ‘ಭಯಾನಕ ಪರಮಾಣು ದಾಳಿ ನಡೆಸಿ ಸರ್ವನಾಶ’ ಮಾಡುವುದಾಗಿ ಉತ್ತರ ಕೊರಿಯ ಅಮೆರಿಕಕ್ಕೆ ಬೆದರಿಕೆ ಹಾಕಿದೆ. ಶತ್ರುಗಳು ‘ಪ್ರಚೋದನೆಯ ತುಸು ಲಕ್ಷಣ’ ತೋರಿಸಿದರೂ ಅವರ ನೆಲೆಗಳ ಮೇಲೆ ಮುಂಚಿತ ದಾಳಿ ನಡೆಸಿ ಅವರನ್ನು ಮುಗಿಸಿ ಬಿಡಲು ತಾನು ಸಿದ್ಧ ಎಂದು ಹೇಳಿದೆ.

 ‘‘ಅಭೂತಪೂರ್ವ ಸಮಸ್ಯೆಗಳು ಮತ್ತು ಕಿರುಕುಳಗಳ ಹೊರತಾಗಿಯೂ ಡಿಪಿಆರ್‌ಕೆ (ಉತ್ತರ ಕೊರಿಯ) ಅತ್ಯಂತ ಶಕ್ತಿಶಾಲಿ ಪರಮಾಣು ಶಕ್ತ ದೇಶವಾಗಿ ಹೊರಹೊಮ್ಮಿದೆ. ದಿಗ್ಬಂಧನಗಳು, ಒತ್ತಡ ಮತ್ತು ಯುದ್ಧಕ್ಕೆ ಅದು ಅಂಜುವುದಿಲ್ಲ’’ ಎಂದು ಉತ್ತರ ಕೊರಿಯ ಸರಕಾರವನ್ನು ಉಲ್ಲೇಖಿಸಿ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.

  ‘‘ಅಮೆರಿಕ ಸಂಘರ್ಷ ಮತ್ತು ಯುದ್ಧವನ್ನು ಬಯಸಿದರೆ... ಅದು ಭಯಾನಕ ಪರಮಾಣು ದಾಳಿಯನ್ನು ಎದುರು ನೋಡುತ್ತದೆ ಹಾಗೂ ಸರ್ವನಾಶವಾಗುತ್ತದೆ’’ ಎಂದು ಉತ್ತರ ಕೊರಿಯ ಎಚ್ಚರಿಸಿದೆ.

ತನ್ನ ಮೇಲೆ ಹೊಸದಾಗಿ ‘ಹಾಸ್ಯಾಸ್ಪದ ಮತ್ತು ನಿರ್ಲಕ್ಷದ’ ದಿಗ್ಬಂಧನಗಳನ್ನು ವಿಧಿಸುವಂತೆ ಕರೆ ನೀಡಿದ ಅಮೆರಿಕವನ್ನು ಉತ್ತರ ಕೊರಿಯ ಮತ್ತೊಮ್ಮೆ ಖಂಡಿಸಿದೆ.

 ‘‘ಶತ್ರುಗಳು ವಿಧಿಸಿರುವ ಅತ್ಯಂತ ಕಠಿಣ ದಿಗ್ಬಂಧನಗಳು ಮತ್ತು ತಡೆಗಳ ಹೊರತಾಗಿಯೂ ಉತ್ತರ ಕೊರಿಯ ತಾನು ಬಯಸಿದ ಎಲ್ಲವನ್ನೂ ಪಡೆದುಕೊಂಡಿದೆ. ಹೊಸ ‘ದಿಗ್ಬಂಧನ’ಗಳ ಮೂಲಕ ಡಿಪಿಆರ್‌ಕೆ ತನ್ನ ನಿಲುವನ್ನು ಬದಲಾಯಿಸುವಂತೆ ಮಾಡಬಹುದು ಎಂದು ಭಾವಿಸುವುದು ಹಗಲುಗನಸಾಗಿದೆ’’ ಎಂದು ಹೇಳಿಕೆ ತಿಳಿಸಿದೆ.

ವಿಶ್ವಸಂಸ್ಥೆಯಲ್ಲಿ ಮಂಗಳವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಭಾಷಣಕ್ಕೆ ಉತ್ತರ ಕೊರಿಯ ಇಷ್ಟು ಕಟುವಾಗಿ ಪ್ರತಿಕ್ರಿಯಿಸಿದೆ. ಉತ್ತರ ಕೊರಿಯವು ಅಮೆರಿಕ ಅಥವಾ ಅದರ ಮಿತ್ರ ದೇಶಗಳ ಮೇಲೆ ದಾಳಿ ನಡೆಸಿದರೆ ಆ ದೇಶವನ್ನು ಪುಡಿಗೈಯಲಾಗುವುದು ಎಂಬುದಾಗಿ ಟ್ರಂಪ್ ತನ್ನ ಭಾಷಣದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News