ಜಗದೀಶ್ ಕಾರಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

Update: 2017-09-21 12:59 GMT

ಪುತ್ತೂರು, ಸೆ.21: ಇಲ್ಲಿನ ಕಿಲ್ಲೆ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಕೋಮು ಪ್ರಚೋದನಕಾರಿಯಾಗಿ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿ, ಬೆದರಿಕೆ ಒಡ್ಡಿದ ಆರೋಪದಲ್ಲಿ ಹಿಂಜಾವೇ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಕಾರಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.

ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಕಾರಂತ್, ಗ್ರಾಮಾಂತರ ಠಾಣಾ ಎಸ್ಸೈ ಅಬ್ದುಲ್ ಖಾದರ್, ಎಎಸ್ಸೈ ರುಕ್ಮಾ ಹಾಗೂ ಚಂದ್ರ   ಹಿಂದೂ ನಾಯಕರನ್ನು ದಮನಿಸುವ ಕೃತ್ಯವನ್ನು ಮಾಡುತ್ತಿದ್ದಾರೆ. ಎಸ್ಸೈ ಖಾದರ್ ತಲೆಯನ್ನು ಬೋಳಿಸಿ ಪುತ್ತೂರು ಬಸ್ ನಿಲ್ದಾಣದಲ್ಲಿ ಕತ್ತೆಯ ಮೇಲೆ ಕೂರಿಸಿ ಬೆತ್ತಲೆ ಮೆರವಣಿಗೆ ಯಾಕೆ ಮಾಡಬಾರದು ಎಂದು ಹೇಳಿದ್ದರು. ಪೊಲೀಸರ ಕೃತ್ಯ ಇದೇ ರೀತಿ ಮುಂದುವರಿದಲ್ಲಿ ಪುತ್ತೂರನ್ನು ಹಳೆಯ ಸುರತ್ಕಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು.

ಪೊಲೀಸ್ ಅಧಿಕಾರಿಯ ವಿರುದ್ಧದ ಹೇಳಿಕೆಯಿಂದ ಅಧಿಕಾರಿಗಳ ನೈತಿಕ ಸ್ಥೈರ್ಯಕ್ಕೆ ಕುಂದುಂಟಾಗಿದ್ದು, ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೂ ಕಾರಣವಾಗಿತ್ತು. ಇದು ಪ್ರಚೋದನಕಾರಿ ಭಾಷಣವಾಗಿದ್ದು, ಕಾರಂತ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಡವೂ ವ್ಯಕ್ತವಾಗಿತ್ತು.

ಬುಧವಾರ ರಾತ್ರಿಯೇ ಪ್ರಕರಣ ದಾಖಲು: ಪ್ರಕರಣ ನಡೆದು 5 ದಿನಗಳು ಕಳೆದರೂ ಯಾವುದೇ ಕೇಸು ದಾಖಲಾಗಿರಲಿಲ್ಲ. ಗೃಹ ಸಚಿವರು ಕೋಮು ಪ್ರಚೋದನೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದ ಬಳಿಕ ಪುತ್ತೂರು ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 505(1)ಸಿ,505(2) 153(ಎ) 189  ಸೆಕ್ಷನ್ ನಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News