ಮಂಗಳೂರು : ಅಸ್ವಸ್ಥ ವ್ಯಕ್ತಿ ಮೃತ್ಯು
Update: 2017-09-21 18:53 IST
ಮಂಗಳೂರು, ಸೆ. 21: ಬಜ್ಪೆ ಪೊಲೀಸ್‌ಠಾಣಾವ್ಯಾಪ್ತಿಯ ಅಜಾರು ಎಂಬಲ್ಲಿ ಅಸ್ವಸ್ಥ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಸ್ಥಳೀಯ ಗ್ರಾ.ಪಂ. ಸದಸ್ಯೆ ರತ್ನಾ ಬಿ. ಎಂಬವರ ಗಂಡ ಆಸ್ಟಿನ್ (54) ಎಂದು ಗುರುತಿಸಲಾಗಿದೆ.
ಕುಡಿತದ ಚಟವನ್ನು ಹೊಂದಿದ್ದು ಇವರು ಕಳೆದ ಕೆಲವು ತಿಂಗಳುಗಳಿಂದ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದರೆಂದು ಹೇಳಲಾಗಿದೆ. ಗುರುವಾರ ಬೆಳಗ್ಗೆ ಕಟೀಲು ಸಮೀಪದ ಅಜಾರು ಬಸ್ ನಿಲ್ದಾಣದಲ್ಲಿ ಕಂಡು ಬಂದ ಅವರು ಹಠಾತ್ ಆಗಿ ವಾಂತಿ ಮಾಡಿದ ಕೆಲವೇ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.