ಕಾನರ್ಪದಲ್ಲಿ ಮದ್ಯದಂಗಡಿ ಆರಂಭ : ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ

Update: 2017-09-21 13:52 GMT

ಬೆಳ್ತಂಗಡಿ,ಸೆ.21: ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿ ಊರವರ ವಿರೋಧದ ನಡೆವೆಯೂ ಮದ್ಯದಂಗಡಿಯೊಂದು ಗುರುವಾರ ಆರಂಭಗೊಂಡ ಸಂದರ್ಭ ಮದ್ಯದಂಗಡಿ ವಿರೋಧಿ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. 

ಮದ್ಯದಂಗಡಿಯೊಂದು ಕಾನರ್ಪಕ್ಕೆ ಸ್ಥಳಾಂತರಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹೋರಾಟ ಸಮಿತಿಯೊಂದನ್ನು ರಚಿಸಿ ಕಳೆದೆರಡು ತಿಂಗಳಿನಿಂದ ತೀವ್ರ ಹೋರಾಟ ನಡೆಸುತ್ತಾ ಬಂದಿದ್ದರು. ಮದ್ಯದಂಗಡಿ ತೆರೆಯದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇವರ ಹೋರಾಟದ ತೀವ್ರತೆಯಿಂದಾಗಿ ಕೆಲ ದಿನಗಳ ಹಿಂದೆ ಅಬಕಾರಿ ಅಧಿಕಾರಿಯವರು ಬಂದು ಸ್ಥಳ ಪರಿಶೀಲನೆ, ಮಹಜರು ನಡೆಸಿದ್ದರು. 

ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಈ ಪರಿಸರದಲ್ಲಿ ಮದ್ಯದಂಗಡಿಗೆ ಪರವಾನಿಗೆ ಕೊಡಬಾರದು. ಅನುಮತಿ ನೀಡಿದರೆ ಕಾಂತ್ರಿಕಾರಕ ಹೋರಾಟ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ಸ್ಥಳೀಯರು ಮದ್ಯದಂಗಡಿ ಬೇಕು ಎಂದು ಸಹಿ ಹಾಕಿದ್ದರು ಎಂದು ಅಬಕಾರಿ ಅಧಿಕಾರಿಯವರು ಹೇಳಿದ್ದರು. ಆದರೆ ಆ ಸಹಿಗಳೆಲ್ಲಾ ನಕಲಿ ಎಂದು ಮಾಹಿತಿ ಹಕ್ಕಿನ ಮೂಲಕ ಹೋರಾಟಗಾರು ಕಂಡು ಕೊಂಡಿದ್ದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಈ ಬಗ್ಗೆ ಕಾನೂನು ಹೋರಾಟ ನಡೆಸುವುದೆಂದು ನಡೆಸುವುದೆಂದು ತೀರ್ಮಾನಿಸಿದ್ದರು.

 ಗುರುವಾರ ಮದ್ಯದಂಗಡಿಯ ಉದ್ಘಾಟನೆ ಆಗುವ ಸುದ್ದಿ ತಿಳಿಯುತ್ತಿದ್ದಂತೆ ಮದ್ಯದಂಗಡಿ ಎದುರು ಹೋರಾಟ ಸಮಿತಿಯ ಸದಸ್ಯರು, ಮಹಿಳೆಯರು ಜಮಾಯಿಸತೊಡಿಗಿದ್ದರು. ಮಹಿಳೆಯರೇ ನೂರಾರು ಸಂಖ್ಯೆಯಲ್ಲಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮದ್ಯದಂಗಡಿಗೆ ಪರವಾನಿಗೆ ಕೊಟ್ಟ ಅಬಕಾರಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗತೊಡಗಿದರು.

ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದಿದ್ದ ಪೋಲಿಸರು ಅಹಿತಕರ ಘಟನೆಗಳು ನಡೆಯದಂತೆ ಭಾರೀ ಪೋಲಿಸ್ ಬಂದೋಬಸ್ ನಡೆಸಲಾಗಿತ್ತು. ಜಿಲ್ಲಾ ಮೀಸಲು ತುಕಡಿಯೊಂದನ್ನು ಹಾಗೂ ಅನೇಕ ಮಹಿಳಾ ಪೋಲಿಸ್ ಪೇದೆಗಳನ್ನು ನಿಯೋಜಿಸಿತ್ತು. ಬೆಳ್ತಂಗಡಿ, ಪುಂಜಾಲಕಟ್ಟೆ, ಧರ್ಮಸ್ಥಳ ಠಾಣೆಯ ಪೋಲಿಸರೂ ನಿಯೋಜನಗೊಂಡಿದ್ದರು. ಪೋಲಿಸ್ ಪರವಾನಿಗೆ ಇಲ್ಲದೆ ಪ್ರತಭಟನೆ ನಡೆಸಿರುವುದಕ್ಕೆ ಪೋಲಿಸ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ಮಹಿಳೆಯರು, ಪುರುಷರು ಪೋಲಿಸ್ ವಾಹನಕ್ಕೇ ಮುತ್ತಿಗೆ ಹಾಕಿದರು. ಅಬಕಾರಿ ಇಲಾಖೆಯ ಸಿಬ್ಬಂದಿಗಳು ಇದ್ದರು. 

ಇತ್ತ ಮದ್ಯದಂಗಡಿಯಲ್ಲಿ ಮದ್ಯದ ವ್ಯಾಪಾರ ಆರಂಭವಾಗುತ್ತಿದ್ದಂತೆ ಮದ್ಯವನ್ನು ಖರೀದಿಸಿ ಕೊಂಡು ಹೋಗಲು ಅನುಮತಿ ಇರುವುದೇ ವಿನಹ ಅಲ್ಲಿಯೇ ಕುಡಿಯಲು ಇಲ್ಲ. ಆದರೆ ಮದ್ಯವನ್ನು ಅಲ್ಲಿಯೇ ಕುಡಿಯುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಅಬಕಾರಿ ಅಧಿಕಾರಿಗಳಿಗೆ ಪ್ರತಿಭಟನಾಕಾರರು ದೂರು ನೀಡಿದಾಗ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿದಿರುವುದು ಕಂಡು ಬಂತು. ಇದರಿಂದ ಪ್ರತಿಭಟನಾಕಾರರು ಇನ್ನಷ್ಟು ಕೆರಳಿದರು. ಪ್ರತಿಭಟನಾಕಾರರಿಗೆ ಹಾಗೂ ಪೋಲಿಸ್ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಯಿತು. 

ಪ್ರತಿಭಟನೆಗೆ ಮದ್ಯದಂಗಡಿಯವರು ಮಣಿಯದೇ ಇರುವ ಹಿನ್ನಲೆಯಲ್ಲಿ ಹೋರಾಟವನ್ನು ಶುಕ್ರವಾರ ಇನ್ನಷ್ಟು ತೀವ್ರಗೊಳಿಸುವುದಾಗಿ ನಿರ್ಧರಿಸಿದ್ದಾರೆ. ಸಮಿತಿಯ, ಮಹಿಳೆಯರ ಹಾಗು ಸಾರ್ವಜನಿಕರ ಹೋರಾಟದಿಂದಾಗಿ ಮದ್ಯದಂಗಡಿ ಅಲ್ಲಿಂದ ಎತ್ತಂಗಡಿಯಾಗುತ್ತದೆಯೋ ಅಥವಾ ಮುಂದುವರಿಯುತ್ತದೆಯೋ ಎಂದು ಕಾದು ನೋಡಬೇಕಾಗಿದೆ.

ಮದ್ಯದಂಗಡಿಯ ಸ್ಥಳ ತನಿಖೆಗೆ ಗುರುವಾರ ಬೆಳಿಗ್ಗೆ ಅಬಕಾರಿ ಇಲಾಖೆಯ ಜಿಲ್ಲಾ ಅಕಾರಿಯವರು ಸ್ಥಳಕ್ಕೆ ಆಗಮಿಸಿದಾಗ ಊರವರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಂಬಂಧಪಟ್ಟ ಅಕಾರಿಯವರಿಗೆ ಹಲವಾರು ಬಾರಿ ಬೇಡಿಕೆ ಸಲ್ಲಿಸಿದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಇರುವುದರ ಬಗ್ಗೆ ಮತ್ತು ಮದ್ಯದಂಗಡಿ ಮಾಲಕರ ಲಾಬಿಗೆ ಮಣಿದು ಒಂದೇ  ದಿನದಲ್ಲಿ ಸ್ಥಳ ತನಿಖೆ ಹಾಗೂ ಪರವಾನಿಗೆ  ನೀಡಲು ಮುಂದಾಗುತ್ತಿರುವ ಇಲಾಖೆಯ ನೀತಿಯನ್ನು ಸೇರಿದ್ದ ಜನರು ತೀವ್ರವಾಗಿ ವಿರೋಧಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News