ದಾವೂದ್ ನನ್ನು ಭಾರತಕ್ಕೆ ಕರೆತಂದು ರಾಜಕೀಯ ಲಾಭ ಪಡೆಯಲು ಕೇಂದ್ರದ ಲೆಕ್ಕಾಚಾರ: ರಾಜ್ ಠಾಕ್ರೆ ಆರೋಪ

Update: 2017-09-21 14:13 GMT

ಮುಂಬೈ, ಸೆ.21: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹೀಂನನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆತನ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

2019ರ ಚುನಾವಣೆಗೂ ಮುನ್ನ ದಾವೂದ್‌ನನ್ನು ಭಾರತಕ್ಕೆ ಕರೆತಂದು ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರ ಕೇಂದ್ರ ಸರಕಾರದ್ದಾಗಿದೆ . ದಾವೂದ್ ಭಾರತಕ್ಕೆ ಮರಳಿ ಬರಲು ಆಸಕ್ತನಾಗಿದ್ದು ಬಿಜೆಪಿ ಇದರ ಲಾಭ ಪಡೆಯುವ ಉದ್ದೇಶ ಹೊಂದಿದೆ ಎಂದು ಠಾಕ್ರೆ ಆರೋಪಿಸಿದ್ದಾರೆ.

 ಎಂಎನ್‌ಎಸ್ ಕಾರ್ಯಕರ್ತರ ಜೊತೆ ಸಂಪರ್ಕ ಹೊಂದಿರುವ ಉದ್ದೇಶದಿಂದ ಫೇಸ್‌ಬುಕ್ ಪುಟವೊಂದನ್ನು ಆರಂಭಿಸಿರುವ ರಾಜ್ ಠಾಕ್ರೆ, ಭಾರತಕ್ಕೆ ಮರಳುವ ಉದ್ದೇಶ ಹೊಂದಿರುವ ದಾವೂದ್ ಈ ಕುರಿತು ಕೇಂದ್ರ ಸರಕಾರದೊಡನೆ ಮಾತುಕತೆ ನಡೆಸಿದ್ದಾನೆ. ದಾವೂದ್‌ಗೆ ಈಗ ತೀವ್ರ ಅನಾರೋಗ್ಯವಿದ್ದು ನಿಶ್ಯಕ್ತನಾಗಿದ್ದಾನೆ. ಭಾರತದಲ್ಲೇ ಕೊನೆಯುಸಿರೆಳೆಯಬೇಕು ಎಂಬುದು ದಾವೂದ್ ಇಚ್ಛೆಯಾಗಿದ್ದು, ಸ್ವಯಂ ಭಾರತಕ್ಕೆ ಬರಲು ಮುಂದಾಗಿದ್ದರೂ, ಇದರ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಬಿಜೆಪಿ ಇದರಲ್ಲಿ ಮಧ್ಯಪ್ರವೇಶಿಸಿದೆ. ಕೇಂದ್ರದಲ್ಲಿ ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದ ಆಗದಿರುವ ಕಾರ್ಯವನ್ನು ಐದೇ ವರ್ಷದಲ್ಲಿ ನಾವು ಮಾಡಿದ್ದೇವೆ ಎಂದು ಬಿಂಬಿಸಿ ಪ್ರಚಾರ ಪಡೆದುಕೊಳ್ಳುವ ಉದ್ದೇಶ ಬಿಜೆಪಿಯದ್ದಾಗಿದೆ ಎಂದು ಠಾಕ್ರೆ ಟೀಕಿಸಿದ್ದಾರೆ.

ಮುಂಬೈ- ಅಹ್ಮದಾಬಾದ್ ಬುಲೆಟ್ ಟ್ರೈನ್ ಬಗ್ಗೆ ಮೋದಿಯನ್ನು ಟೀಕಿಸಿದ್ದ ಠಾಕ್ರೆ, ಇದು ದುಂದುವೆಚ್ಚವಾಗಿದ್ದು ಇದರ ಹಿಂದೆ ದುರುದ್ದೇಶ ಇರುವುದಾಗಿ ಸಂಶಯ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News