ಮುಸ್ಲಿಮ್ ಯುವಕನ ಜೊತೆಗಿದ್ದ ಹಿಂದೂ ಯುವತಿಗೆ ಹಲ್ಲೆಗೈದ ಬಿಜೆಪಿ ನಾಯಕಿ

Update: 2017-09-21 14:07 GMT

ಹೊಸದಿಲ್ಲಿ, ಸೆ.21: ಹೋಟೆಲ್ ನಲ್ಲಿ ಮುಸ್ಲಿಮ್ ಯುವಕನ ಜೊತೆಗಿದ್ದ ಹಿಂದೂ ಯುವತಿಯೊಬ್ಬಳಿಗೆ ಬಿಜೆಪಿ ನಾಯಕಿಯೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್ ಐಆರ್ ಕೂಡ ದಾಖಲಿಸಿದ್ದಾರೆ. ಆದರೆ, ಹಲ್ಲೆಗೈದವರ ವಿರುದ್ಧವಲ್ಲ, ಬದಲಾಗಿ ಮುಸ್ಲಿಮ್ ಯುವಕನ ವಿರುದ್ಧ!.

ಬಿಜೆಪಿ ಮಹಿಳಾ ಮೋರ್ಛಾದ ಅಲಿಗಡ ಘಟಕಾಧ್ಯಕ್ಷೆ ಸಂಗೀತಾ ವಾರ್ಶ್ನಿ ಎಂಬಾಕೆ ಯುವತಿಗೆ ಕೆನ್ನೆಗೆ ಬಾರಿಸಿದ ನಂತರ, "ನಿನಗೆ ಎಳ್ಳಷ್ಟೂ ನಾಚಿಕೆಯಿಲ್ಲವೇ. ನಿನಗೆ ಅಷ್ಟೊಂದು ಪ್ರಾಯವಾಗಿದೆಯೇ. ಹಿಂದೂ ಯಾರು, ಮುಸ್ಲಿಮ್ ಯಾರು ಎಂಬುದನ್ನೂ ನಿನಗೆ ಅರ್ಥ ಮಾಡಿಕೊಳ್ಳಲಾಗುವುದಿಲ್ಲವೇ’ ಎಂದು ಗದರಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಸಂಗೀತಾ, ಆ ಹುಡುಗಿಯ ತಂದೆಯನ್ನೂ ಸ್ಥಳಕ್ಕೆ ಕರೆಸಿಕೊಂಡು ಆ ಹುಡುಗಿಗೆ ಕಪಾಳಮೋಕ್ಷ ಮಾಡುವಂತೆ ಸೂಚಿಸಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಯುವತಿ ಮತ್ತಾಕೆಯ ಪ್ರಿಯಕರ ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸ್ಥಾಪಿಸಿರುವ ‘ಹಿಂದೂ ಯುವ ವಾಹಿನಿ’ಯ ಸದಸ್ಯರು, ಆ ಜೋಡಿಯನ್ನು ಸುತ್ತುವರಿದು ಪ್ರಶ್ನಿಸಿದಾಗ ಇಬ್ಬರೂ ಪ್ರತ್ಯೇಕ ಧರ್ಮಕ್ಕೆ ಸೇರಿದವರೆಂದು ತಿಳಿದುಬಂದಿದೆ. ತಕ್ಷಣ ಅವರಿಬ್ಬರನ್ನು ತರಾಟೆಗೆತ್ತಿಕೊಂಡ ಸಂಘಟನೆ ಸದಸ್ಯರು, ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ.

"ಇವರಿಬ್ಬರನ್ನು ಕಳೆದ ಕೆಲ ತಿಂಗಳಿನಿಂದ ಗಮನಿಸುತ್ತಿದ್ದೇವೆ. ಈ ಜೋಡಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ ಪ್ರಶ್ನಿಸಿದ್ದೇವೆ. ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದೇವೆ" ಎಂದು ಹಿಂದೂ ಯುವವಾಹಿನಿಯ ನೌರಂಗಾಬಾದ್‌ನ ಪ್ರಧಾನ ಕಾರ್ಯದರ್ಶಿ ದೀಪಕ್ ಶರ್ಮ ತಿಳಿಸಿದ್ದಾನೆ.

ಈ ವ್ಯಕ್ತಿ ತನ್ನ ಗೆಳೆಯನಾಗಿದ್ದು, ಕಳೆದ ಕೆಲ ವರ್ಷಗಳಿಂದ ಸಂಬಂಧ ಹೊಂದಿದ್ದೇವೆ ಎಂದು ಮಹಿಳೆ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಠಾಣೆಗೆ ಆಗಮಿಸಿದ ಮಹಿಳೆಯ ತಂದೆ ಕೂಡಾ ತಾನು ಯಾರ ವಿರುದ್ಧವೂ ದೂರು ದಾಖಲಿಸಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೂ ಪೊಲೀಸರು ಮಹಿಳೆಯ ಗೆಳೆಯನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಹುಡುಗಿಯ ತಂದೆ ಯಾರೊಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲು ಬಯಸಲಿಲ್ಲ ಮತ್ತು ತನ್ನ ಮಗಳನ್ನು ಠಾಣೆಯಿಂದ ಕರೆದೊಯ್ದರು. ಆದರೂ , ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಲ್ಲಿ ಆಕೆಯ ಗೆಳೆಯನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News