ಸಾವಯವ ಗ್ರಾಮ ನಿರ್ಮಾಣ ಮಾಡಿ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಸೆ.21: ಜಿಲ್ಲೆಯ ಯಾವುದಾದರೂ ಒಂದು ಗ್ರಾಮದಲ್ಲಿ ಸಂಪೂರ್ಣವಾಗಿ ಸಾವಯವ ಪದ್ದತಿಯಲ್ಲಿ ಬೆಳೆ ಬೆಳೆಯುವ ಮೂಲಕ ‘ಸಾವಯವ ಗ್ರಾಮ’ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಪಸಲ್ ಬಿಮಾ ಯೋಜನೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಯಾವುದಾದರೊಂದು ಗ್ರಾಮವನ್ನು ಆಯ್ಕೆ ಮಾಡಿ, ಆ ಗ್ರಾಮ ದಲ್ಲಿ ಬಿತ್ತನೆಯಿಂದ ಕಟಾವಿನವರೆಗೆ ಸಂಪೂರ್ಣ ಸಾವಯವ ಪದ್ದತಿಯಲ್ಲಿ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಸಾವಯವ ಗ್ರಾಮ ನಿರ್ಮಾಣ ಮಾಡುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಅ.15ರಂದು ಸಾವಯವ ಸಂತೆ ಏರ್ಪಡಿಸುವ ಕುರಿತಂತೆ ರೈತರಿಗೆ ಮಾಹಿತಿ ನೀಡುವಂತೆ ತಿಳಿಸಿದರು. ಅಲ್ಲದೇ ಅಗತ್ಯವಿರುವ ಪ್ರಚಾರ ಸಾಮಗ್ರಿಸಿದ್ದಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಪ್ರಚಾರ ನೀಡುವುದರ ಮೂಲಕ ಸಾವಯವ ರೈತರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವಂತೆ ಸೂಚಿಸಿದರು.
ಸಾವಯವ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಲು ಹಾಗೂ ಬೆಳೆಗಳು ಕೀಟಗಳಿಂದ ಮತ್ತು ರೋಗಗಳಿಂದ ಮುಕ್ತವಾಗಲು, ಘನ ಮತ್ತು ದ್ರವ ಸಂಪನ್ಮೂಲದಿಂದ ತಯಾರಿಸಿದ ಉತ್ಪನ್ನಗಳು ಉತ್ತಮ ಫಲಿತಾಂಶ ನೀಡುತ್ತಿವೆ. ಇವುಗಳ ಬಳಕೆ ಕುರಿತಂತೆ ರೈತರಿಗೆ ತಿಳಿಸುವಂತೆ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಫಾರಂಗಳಲ್ಲಿ ಇವುಗಳನ್ನು ಬಳಕೆ ಮಾಡುವಂತೆ ಪ್ರಿಯಾಂಕ ತಿಳಿಸಿದರು.
ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಕ್ರಿಯೆಗೆ ಸ್ಮಾರ್ಟ್ ಪೋನ್ ಬಳಸಿ, ಮೊಬೈಲ್ ತಂತ್ರಾಂಶದ ಮೂಲಕ ಬೆಳೆ ಕಟಾವು ಕೈಗೊಳ್ಳುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಬೆಳೆ ಕಟಾವು ಮಾಡುವ ನಿಗದಿತ ದಿನದಂದು, ಮೊಬೈಲ್ ಆ್ಯಪ್ ಮೂಲಕ ಸೆರೆ ಹಿಡಿಯಲಾಗುವ ಬೆಳೆ ಕಟಾವಿನ ಪೋಟೊ ಮತ್ತು ವಿಡಿಯೋಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಮೂಲಕ, ವೈಜ್ಞಾನಿಕ ರೀತಿಯಲ್ಲಿ ಇಳುವರಿಯನ್ನು ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂವಿತಾ, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಂಥೋಣಿ ಮರಿಯಾ ಇಮಾನ್ಯುಯಲ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ. ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.