ಕಾಂಕ್ರೀಟ್‌ಗೆ ಬಲಕ್ಕಿಂತ ಬಾಳಿಕೆ ಮುಖ್ಯ: ಪ್ರೊ.ಎಂ.ಎಸ್.ಶೆಟ್ಟಿ
ಉಡುಪಿ, ಸೆ.21: ಕೆಲ ವರ್ಷಗಳ ಹಿಂದಿನವರೆಗೆ ಕಾಂಕ್ರೀಟ್‌ಗೆ ಬಲ ಅಥವಾ ತಾಳಿಕೆ ಮುಖ್ಯವಾಗಿತ್ತು. ಆದರೆ ಇಂದು ಜಗತ್ತಿನಾದ್ಯಂತ ಕಾಂಕ್ರೀಟ್‌ಗೆ ಬಾಳಿಕೆಯೇ ಅತಿಅಗತ್ಯವಾಗಿದೆ ಎಂದು ಖ್ಯಾತ ಸಿವಿಲ್ ಇಂಜಿನಿಯರ್ ಹಾಗೂ ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್‌ನಿಂದ ಜೀವಮಾನ ಸಾಧಕ ಪ್ರಶಸ್ತಿ ಪಡೆದಿರುವ ಪ್ರೊ.ಎಂ.ಎಸ್.ಶೆಟ್ಟಿ ಹೇಳಿದ್ದಾರೆ.
ಕುಂದಾಪುರದ ಮೂಡ್ಲುಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಜ್ಯ ಸರಕಾರದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಹಾಗೂ ನಿರ್ಮಿತಿ ಕೇಂದ್ರ ಉಡುಪಿ ಇವುಗಳ ಸಹಯೋಗದಲ್ಲಿ ನಗರದ ಹೊಟೇಲ್ ಒಶಿಯನ್ ಪರ್ಲ್‌ನ ಕಾನ್ಫರೆನ್ಸ್ ಹಾಲ್‌ನಲ್ಲಿ ಹಮ್ಮಿಕೊಂಡ ‘ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಉತ್ತಮ ನಿರ್ಮಾಣಕ್ಕಾಗಿ ಕಾಂಕ್ರೀಟ್ ತಂತ್ರಜ್ಞಾನ’ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ನಿರ್ಮಾಣ ಕಾರ್ಯದಲ್ಲಿ ಕಾಂಕ್ರೀಟ್‌ಗೆ ಬದಲಿ ವಸ್ತುವೇ ಸದ್ಯಕ್ಕೆ ಇಲ್ಲವಾಗಿದೆ. ಜನರ ನಿತ್ಯ ಬಳಕೆಯಲ್ಲಿ ಇದು ನೀರಿನ ನಂತರ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿ ಮನುಷ್ಯನಿಗೆ ತಲಾ ಎರಡು ಟನ್ ಕಾಂಕ್ರಿಟ್ ಬಳಕೆಯಾಗುತ್ತಿದೆ. ದೇಶದ ಶೇ.50ರಷ್ಟು ಬಜೆಟ್ ಕಾಂಕ್ರಿಟ್‌ಗೆ ವ್ಯಯವಾಗುತ್ತಿದೆ ಎಂದು ಪ್ರೊ.ಶೆಟ್ಟಿ ವಿವರಿಸಿದರು.
ಕಾಂಕ್ರಿಟ್ ಎಂಬುದು ಭೂಮಿ ಒಳಗೆ ಹಾಗೂ ಭೂಮಿಯ ಮೇಲೂ ಬಳಕೆ ಯಾಗುತ್ತಿದೆ. ಇದನ್ನು ಬಲ, ತಾಳಿಕೆ ಹಾಗೂ ಬಾಳಿಕೆಯ ಮೇಲೆ ಅಳೆಯ ಲಾಗುತ್ತದೆ. ಇನ್ನು ಮುಂದಿನ 50ವರ್ಷಗಳವರೆಗೆ ಕಾಂಕ್ರಿಟ್‌ಗೆ ಬದಲಿ ವಸ್ತು ಬರುವುದು ಸಂಶಯ ಎಂದು ಸಿವಿಲ್ ಇಂಜಿನಿಯರಿಂಗ್‌ನಲ್ಲಿ 63 ವರ್ಷಗಳ ಸುಧೀರ್ಘ ಅನುಭವ ಹೊಂದಿರುವ ಪ್ರೊ.ಶೆಟ್ಟಿ ನುಡಿದರು.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ (ಕೆಆರ್‌ಐ ಡಿಎಲ್)ಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣ ಹೆಬ್ಸೂರು ಅವರು ಮಾತನಾಡಿ, ದೇಶದಲ್ಲಿ ಪ್ರತಿದಿನ ನೂರಾರು ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳುತಿದ್ದು, ಇದಕ್ಕೆ ಸೂಕ್ತ ತಾಂತ್ರಿಕ ತರಬೇತಿ ಅತಿ ಅಗತ್ಯ ಎಂದರು.
ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ಕುಮಾರ್ ಮಾತನಾಡಿ, ನಾವು ಅತಿಯಾದ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದ್ದು, ಇದರಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ. ಇದರಿಂದ ಬಾಳಿಕೆಗೂ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಸಭೆಯಲ್ಲಿ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಕುಂದಾಪುರ ಎಂಐಟಿಯ ಇಎಂಡ್‌ಇ ವಿಭಾಗ ಮುಖ್ಯಸ್ಥ ಪ್ರೊ.ಸತೀಶ್ ಎಸ್.ಅಮ್ಸಾಡಿ ಉಪಸ್ಥಿತರಿದ್ದರು. ಎಂಐಟಿಯ ಪ್ಲೇಸ್‌ಮೆಂಟ್ ಅಧಿಕಾರಿ ಡಾ.ತನ್ಯಾ ಶೆಣೈ ಅತಿಥಿಗಳನ್ನು ಸ್ವಾಗತಿಸಿದರೆ, ಕಾಲೇಜಿನ ಪ್ರಾಂಶುಪಾಲ ಡಾ.ಕಾಟಯ್ಯ ವಂದಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಶಶಿಲಾ ಎ. ಕಾರ್ಯಕ್ರಮ ನಿರ್ವಹಿಸಿದರು.