ಉಡುಪಿ: ದಸರಾ ಪ್ರಯುಕ್ತ ಗೊಂಬೆಗಳ ಪ್ರದರ್ಶನ
ಉಡುಪಿ, ಸೆ.21: ನವರಾತ್ರಿ-ದಸರಾ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ವೈವಿಧ್ಯಮಯ, ವಿವಿಧ ಬಣ್ಣ, ವಿನ್ಯಾಸ, ವಿಷಯಗಳ ಗೊಂಬೆಗಳನ್ನು ಪ್ರದರ್ಶಿಸುವುದು ರಾಜ್ಯದ ಮೈಸೂರು, ಬೆಂಗಳೂರು ಸೇರಿದಂತೆ ಒಳನಾಡಿನ ಪ್ರದೇಶಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಇದೊಂದು ಸಂಪ್ರದಾಯದ ರೀತಿಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದೀಗ ಈ ಪ್ರವೃತ್ತಿ ನಿಧಾನಾಗಿ ಕರಾವಳಿಯಲ್ಲೂ ಕಂಡುಬರುತ್ತಿದೆ.
ಉಡುಪಿಯ ಸಾಯಿರಾಧಾ ರೆಸಿಡೆನ್ಸಿಯ ‘ಯಶೋಧಾ’ದಲ್ಲಿ ವಾಸವಾ ಗಿರುವ ಶುಭಾ ರವೀಂದ್ರ ಅವರ ಮನೆಯಲ್ಲಿ ವಿವಿಧ ರೀತಿಯ ಗೊಂಬೆಗಳ ನ್ನು ಜೋಡಿಸಿ ಇಡಲಾಗಿದೆ. ಗೊಂಬೆಗಳ ಮೂಲಕವೇ ದಶಾವತಾರ, ಶ್ರೀರಾಮ ಸೇತು, ಶ್ರೀನಿವಾಸ ಕಲ್ಯಾಣ, ಹಳ್ಳಿಯ ಜೀವನ ಶೈಲಿ, ಘಟೋತ್ಕಚ, ದೇವಿ ಉತ್ಸವ, ಮದುವೆ ಸಂಭ್ರಮ ಹೀಗೆ ಇನ್ನೂರು ಗೊಂಬೆಗಳನ್ನು ವಿಶೇಷ ರೀತಿಯಲ್ಲಿ ಜೋಡಿಸಿದ್ದಾರೆ.
ಅಲ್ಲದೆ ಮನೆಯಲ್ಲಿಯೇ ವಿಶೇಷ ಚಾಕಲೇಟಿನಿಂದ ತಾಜಮಹಲ್, ಮನೆ, ರೈಲ್‌ಬಂಡಿ ಮುಂತಾದವುಗಳನ್ನು ತಯಾರಿಸಿ ಮನೆಯ ದೇವರ ಕೋಣೆಯಲ್ಲಿ ಜೋಡಿಸಿಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಶುಭಾ ರವೀಂದ್ರ.