×
Ad

ಕ್ರಿಯಾಶೀಲರಾಗಿರುವ ಮೂಲಕ ಮರೆಗುಳಿತನದಿಂದ ರಕ್ಷಣೆ ಸಾಧ್ಯ

Update: 2017-09-21 20:54 IST

ಉಡುಪಿ, ಸೆ.21: ಹೆಚ್ಚು ಕ್ರಿಯಾಶೀಲರಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮರೆಗುಳಿತನ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಹಾಗೂ ಮನೋತಜ್ಞ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಆಶ್ರಯದಲ್ಲಿ ಉಡುಪಿ ಬ್ರಹ್ಮಗಿರಿಯ ಐಎಂಎ ಹಾಲ್ ನಲ್ಲಿ ಬುಧವಾರ ವಿಶ್ವ ಆಲ್ಝೈಮರ್ ದಿನದ ಅಂಗವಾಗಿ ಏರ್ಪಡಿಸಲಾದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಈ ಕಾಯಿಲೆಗೆ ನಿಖರವಾದ ಕಾರಣ ಎಂಬುದಿಲ್ಲ. ಇದು ಯಾರಿಗೂ ಬರ ಬಹುದು. ರಕ್ತದೊತ್ತಡ, ಮಧುಮೇಹ, ಮದ್ಯ, ಸಿಗರೇಟ್ ಸೇವನೆ ಚಟ ಹೊಂದಿರುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ಕಾಯಿಲೆಯನ್ನು ಮಿನಿ ಮೆಂಟಲ್ ಸ್ಟೇಟಸ್ ಪರೀಕ್ಷೆಯ ಮೂಲಕ ಪತ್ತೆ ಹಚ್ಚ ಬಹುದಾಗಿದೆ ಎಂದು ಅವರು ತಿಳಿಸಿದರು.

65ವರ್ಷ ಪ್ರಾಯದ ನಂತರ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಆದರೆ ಈ ಕಾಯಿಲೆಯ ಬೀಜ 40-50ವರ್ಷ ವಯಸ್ಸಿನಲ್ಲೇ ಮೊಳಕೆ ಒಡೆಯುತ್ತದೆ. ಮೆದುಳಿಗೆ ಹೆಚ್ಚು ಕೆಲಸ ನೀಡುವುದರಿಂದ ಈ ಕಾಯಿಲೆ ಬಾರದಂತೆ ತಡೆಯ ಬಹುದಾಗಿದೆ. ಈ ಕಾಯಿಲೆಗೆ ಆಧುನಿಕ ಅಥವಾ ಪುರಾತನ ವೈದ್ಯಕೀಯ ಶಾಸ್ತ್ರದಲ್ಲಿ ಯಾವುದೇ ಚಿಕಿತ್ಸೆ ಎಂಬುದಿಲ್ಲ. ಹೊಸತನ್ನು ಮರೆತು ಹಳೆಯದನ್ನು ನೆನಪಿಟ್ಟುಕೊಳ್ಳುವುದೇ ಈ ಕಾಯಿಲೆಯ ಪ್ರಮುಖ ಲಕ್ಷಣ. ಮುಂದೆ ಹಾಸಿಗೆ ಹಿಡಿಯುವ ರೋಗಿ ಕೊನೆಗೆ ತನ್ನ ಮುಖದ ಪರಿಚಯವನ್ನೇ ಕಳೆದುಕೊಳ್ಳುತ್ತಾನೆ ಎಂದರು.

ಕಾರ್ಯಕ್ರಮವನ್ನು ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಸಿ.ಎಸ್.ರಾವ್ ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಚ್.ವಿಶ್ವನಾಥ್ ಹೆಗ್ಡೆ ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News