ವಿದ್ಯುತ್ ಕೃಷಿ ಪಂಪುಗಳಿಗೆ 10,000ರೂ. ವಸೂಲಿ ಕೂಡಲೇ ನಿಲ್ಲಿಸಿ: ಕೃಷಿಕ ಸಂಘ

Update: 2017-09-21 16:18 GMT

ಉಡುಪಿ, ಸೆ.21: ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕಗೊಂಡ ಕೃಷಿ ಪಂಪುಗಳಿಗೆ 2013ರಿಂದ ಪೂರ್ವನ್ವಯವಾಗುವಂತೆ ಇದೀಗ ಮೂಲಭೂತ ಸೌಕರ್ಯದ ಬಾಬ್ತು 10,000 ರೂ.ವನ್ನು ಕೃಷಿಕರು ಪಾವತಿಸಬೇಕೆಂದು ಮೆಸ್ಕಾಂನಿಂದ ಆದೇಶ ಬಂದಿರುವುದನ್ನು ಉಡುಪಿ ಜಿಲ್ಲಾ ಕೃಷಿಕ ಸಂಘ ವಿರೋಧಿಸಿದೆ.

ಈ ಆದೇಶದ ನೊಟೀಸು ಪಡೆದ ಸಣ್ಣ- ಅತಿ ಸಣ್ಣ ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಅಸಮಂಜಸ ಹಾಗೂ ನ್ಯಾಯ ಬದ್ಧವಲ್ಲದ ಈ ಆದೇಶವನ್ನು ಯಾವುದೇ ಸಮಜಾಯಿಷಿ ನೀಡದೆ ನಿಷ್ಶರ್ತವಾಗಿ ಹಿಂದೆಗೆದುಕೊಳ್ಳಬೇಕೆಂದು ಕೃಷಿಕ ಸಂಘ ಮೆಸ್ಕಾಂ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಮೆಸ್ಕಾಂ 4 ವರ್ಷಗಳ ನಂತರ ಈ ವಸೂಲಿಗೆ ಮುಂದಾಗಿರುವುದು ಸರ್ವತಾ ಸಮರ್ಥನೀಯವಲ್ಲ. ಈಗಾಗಲೇ ಅಕಾಲಿಕ, ಸಮರ್ಪಕ ಮಳೆಯಿಂದ ಬೆಳೆ ಇಲ್ಲದೇ ಕೃಷಿಕರು ಕಂಗೆಟ್ಟಿದ್ದಾರೆ. ಈ ಸಂದರ್ಭದಲ್ಲೇ ಏಕಾಏಕಿ 10,000ರೂ. ವನ್ನು ಸಾಮಾನ್ಯ ಕೃಷಿಕರು ಎಲ್ಲಿಂದ ತಂದು ಪಾತಿಸಬೇಕು ಎಂದು ಸಂಘ ಪ್ರಶ್ನಿಸಿದೆ.

ಈ ಆದೇಶವನ್ನು ರಾಜ್ಯ ಸರಕಾರ 2014ರ ಜುಲೈ ತಿಂಗಳಲ್ಲಿ ಹೊರಡಿಸಿದ್ದರೆ, ಅದು ತಡವಾಗಿ ಪ್ರಕಟಗೊಳ್ಳಲು ಕೃಷಿಕರು ಕಾರಣರಲ್ಲ. ಸರಕಾರ ಮಾಡಿರುವ ತಪ್ಪಿಗೆ ಆಗಲೇ ಕ್ರಮ ಕೈಗೊಳ್ಳದೇ ಈಗ ವಸೂಲಿಗೆ ಹೊರಟಿವುದು ಸರಿಯೇ ಎಂದು ಕೇಳಿರುವ ಸಂಘ, ಬೇರೆ ವರ್ಗಗಳ ವಿದ್ಯುತ್ ಗ್ರಾಹಕರನ್ನು ಬಿಟ್ಟು ಕೇವಲ ಕೃಷಿಕರಿಂದ ಮಾತ್ರ ಈ ಮೊತ್ತ ವಸೂಲು ಮಾಡಲು ಕಾರಣವೇನು ಎಂದು ಖಾರವಾಗಿ ಪ್ರಶ್ನಿಸಿದೆ.

ಈಗಾಗಲೇ ಆರ್ಥಿಕವಾಗಿ ಬಸವಳಿದು ಸಾಲ ಮಾಡಿರುವ ಹಿಂದುಳಿದ ಸಣ್ಣ ರೈತರು, ಸಮಸಯೆಗಳಿಗೆ ಪರಿಹಾರದ ದಾರಿ ಕಾಣದೇ ಕಂಗೆಟ್ಟಿರುವಾಗ ಗಾಯದ ಮೇಲೆ ಬರೆ ಎಳೆವಂತೆ ಇದೀಗ ನೋಟೀಸು ತಲುಪಿ, ಒಂದು ತಿಂಗಳೊಳಗೆ 10,000 ರೂ. ಪಾವತಿಸುವಂತೆ ಮೆಸ್ಕಾಂನ ಆದೇಶ ಕೃಷಿಕರ ಕೈಸೇರಿದೆ. ಇದು ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡುವಂತಿದೆ ಎಂದು ಕೆಂಡ ಕಾರಿದೆ.

ಕೃಷಿಕರ ಪರ ಎಂದು ಹೇಳಿಕೊಳ್ಳುವ ರಾಜ್ಯ ಸರಕಾರ ಈ ಆದೇಶವನ್ನು ವಾಪಾಸು ಪಡೆಯಬೇಕು. ಬಲವಂತದ ವಸೂಲಿಗೆ ಹೊರಟರೆ ಜಿಲ್ಲಾ ಕೃಷಿಕ ಸಂಘ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಸಂಘ ಪ್ರಕಟಣೆಯಲ್ಲಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News