ಎಂಜಿನ್ ನಲ್ಲಿ ದೋಷ : ಮಂಗಳೂರಿನಿಂದ ಹೊರಟ ವಿಮಾನ ತುರ್ತು ಭೂಸ್ಪರ್ಶ

Update: 2017-09-21 16:28 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಸೆ. 21: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾಕ್ಕೆ ಹಾರಾಟ ನಡೆಸಿದ್ದ ವಿಮಾನವು ಕೆಲವೇ ನಿಮಿಷಗಳಲ್ಲಿ ಎಂಜಿನ್‌ನಲ್ಲಿ ಉಂಟಾದ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.

ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಗುರುವಾರ ಸಂಜೆ 5:35ಕ್ಕೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಿಂದ ಹೊರಟಿತ್ತು. ಹಾರಾಟದ ಸಂದರ್ಭದಲ್ಲಿ ಎಂಜಿನ್‌ನಲ್ಲಿ ದೋಷ ಕಂಡಿದ್ದರಿಂದ ಪೈಲಟ್ ಮರಳಿ ಬಜ್ಪೆ ವಿಮಾನ ನಿಲ್ದಾಣದಲ್ಲೇ ವಿಮಾನವನ್ನು ಇಳಿಸುವಲ್ಲಿ ಸಫಲರಾಗಿದ್ದಾರೆ.

 ತಾಂತ್ರಿಕ ದೋಷದಿಂದಾಗಿ ಇಂದಿನ ವಿಮಾನ ಯಾನವನ್ನು ರದ್ದುಗೊಳಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 5:30ಕ್ಕೆ ವಿಮಾನವು ಹೊರಡಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

 ಮಂಗಳೂರಿನಿಂದ ಹೊರಟಿದ್ದ ವಿಮಾನವು ಸುಮಾರು ಅರ್ಧ ಗಂಟೆ ಕಾಲ ಆಕಾಶದಲ್ಲಿ ಹಾರಾಟ ನಡೆಸಿತ್ತು. ಇದೇ ಸಂದರ್ಭದಲ್ಲಿ ಬೃಹತ್ ಶಬ್ದವೊಂದು ಕೇಳಿಬಂದಿದ್ದು, ಅಪಾಯವನ್ನು ಅರಿತ ವಿಮಾನದ ಪೈಲಟ್ ವಿಮಾನವನ್ನು ಮರಳಿ ನಿಲ್ದಾಣದಲ್ಲೇ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕರೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಯಾಣಿಕರ ಪರದಾಟ

ಸಂಜೆ ಸುಮಾರು 6:30ರ ಹೊತ್ತಿಗೆ ವಿಮಾನವು ನಿಲ್ದಾಣಕ್ಕೆ ಹಿಂದಿರುಗಿದ್ದರಿಂದ ಪರ್ಯಾಯ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡಬೇಕಾಯಿತು. ಕೆಲವು ಪ್ರಯಾಣಿಕರಿಗೆ ನಾಳೆಯ ವಿಮಾನದಲ್ಲಿ ಕಳುಹಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರೆ. ಮತ್ತೆ ಕೆಲವರಿಗೆ ರವಿವಾರದ ವಿಮಾನದಲ್ಲಿ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಆದರೆ ಕೆಲವು ಪ್ರಯಾಣಿಕರು ಟಿಕೆಟ್‌ನ್ನು ರದ್ದುಗೊಳಿಸಿ ಊರಿಗೆ ಮರಳಿದ್ದಾರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News