ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ 50 ದೇಶಗಳು ಸಹಿ

Update: 2017-09-21 16:33 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 21: ಜಗತ್ತಿನಿಂದ ಪರಮಾಣು ಅಸ್ತ್ರಗಳನ್ನು ನಿಷೇಧಿಸುವ ಒಪ್ಪಂದವೊಂದಕ್ಕೆ ಬುಧವಾರ 50 ದೇಶಗಳು ಸಹಿ ಹಾಕಿವೆ. ಆದರೆ, ಪರಮಾಣು ಶಕ್ತ ದೇಶಗಳು ಈ ಒಪ್ಪಂದವನ್ನು ತಿರಸ್ಕರಿಸಿವೆ. ಆದಾಗ್ಯೂ, ಇದು ಐತಿಹಾಸಿಕ ಒಪ್ಪಂದ ಎಂಬುದಾಗಿ ಒಪ್ಪಂದದ ಬೆಂಬಲಿಗರು ಬಣ್ಣಿಸಿದ್ದಾರೆ.

‘‘ಜಗತ್ತಿಗೆ ಇಂದು ನೈತಿಕ ನಾಯಕತ್ವ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಅಂಥ ನೈತಿಕ ನಾಯಕತ್ವವನ್ನು ಒದಗಿಸಿದಂಥ ದೇಶಗಳು ನೀವು’’ ಎಂಬುದಾಗಿ ‘ಅಂತಾರಾಷ್ಟ್ರೀಯ ಪರಮಾಣು ಅಸ್ತ್ರಗಳ ನಿರ್ಮೂಲನ ಆಂದೋಲನ’ದ ಕಾರ್ಯಕಾರಿ ನಿರ್ದೇಶಕ ಬಿಯಾಟ್ರೈಸ್ ಫಿಹ್ನ್ ಬಣ್ಣಿಸಿದ್ದಾರೆ.

ಮಂಗಳವಾರ ಇಂಡೋನೇಶ್ಯ ಮತ್ತು ಐರ್‌ಲ್ಯಾಂಡ್ ಸೇರಿದಂತೆ 50 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇತರ ದೇಶಗಳು ಬಯಸಿದರೆ ಮುಂದಕ್ಕೆ ಸಹಿ ಹಾಕಬಹುದಾಗಿದೆ.

ಗಯಾನ, ಥಾಯ್ಲೆಂಡ್ ಮತ್ತು ವ್ಯಾಟಿಕನ್ ದೇಶಗಳು ಈಗಾಗಲೇ ಒಪ್ಪಂದವನ್ನು ಅನುಮೋದಿಸಿವೆ. ಈ ಒಪ್ಪಂದ ಅದನ್ನು ಅಂಗೀಕರಿಸುವ ದೇಶಗಳಲ್ಲಿ ಜಾರಿಗೆ ಬರಬೇಕಾದರೆ ಕನಿಷ್ಠ 50 ದೇಶಗಳು ಅನುಮೋದಿಸಬೇಕಾಗುತ್ತದೆ.

ಇದಕ್ಕೆ ಸಹಿ ಹಾಕುವ ದೇಶಗಳು ಪರಮಾಣು ‘ಯಾವುದೇ ಸಂದರ್ಭದಲ್ಲಿ’ ಅಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು, ಪರೀಕ್ಷೆ ಮಾಡುವುದನ್ನು, ಉತ್ಪಾದಿಸುವುದನ್ನು, ಬೇರೆ ಕಡೆಗಳಿಂದ ಪಡೆದುಕೊಳ್ಳುವುದನ್ನು, ಹೊಂದುವುದನ್ನು ಮತ್ತು ಸಂಗ್ರಹಿಸುವುದನ್ನು ಒಪ್ಪಂದ ನಿಷೇಧಿಸುತ್ತದೆ.

ಈವರೆಗೆ 2 ಪರಮಾಣು ಬಾಂಬ್ ಬಳಕೆ

ಎರಡನೆ ಮಹಾಯುದ್ಧ ಅವಧಿಯಲ್ಲಿ ಅಮೆರಿಕವು ಜಪಾನ್ ಮೇಲೆ ಎರಡು ಅಣು ಬಾಂಬ್‌ಗಳನ್ನು ಹಾಕಿತ್ತು. ಆ ಬಳಿಕ ಅಣುಬಾಂಬ್‌ಗಳ ಬಳಕೆಯಾಗಿಲ್ಲ. ಈಗ ಏಳು ದಶಕಗಳ ಬಳಿಕ ಜಗತ್ತಿನಲ್ಲಿ ಸುಮಾರು 15,000 ಪರಮಾಣು ಬಾಂಬ್‌ಗಳು ಇವೆ ಎಂದು ಭಾವಿಸಲಾಗಿದೆ.

ಅಣು ಯುದ್ಧದ ಅಂಚಿನಲ್ಲಿ ಜಗತ್ತು: ಗುಟರಸ್

ಉತ್ತರ ಕೊರಿಯದ ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಜಗತ್ತು ಇಂದು ಪರಮಾಣು ಯುದ್ಧದ ಅಂಚಿಗೆ ಬಂದು ನಿಂತಿದೆ. ಉತ್ತರ ಕೊರಿಯವನ್ನು ಸರ್ವನಾಶ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದರೆ, ಅಮೆರಿಕವನ್ನು ಅಳಿಸಿಬಿಡುವುದಾಗಿ ಉತ್ತರ ಕೊರಿಯ ಹೇಳಿಕೊಂಡಿದೆ.

ಶೀತಲ ಸಮರದ ಮುಕ್ತಾಯದ ಬಳಿಕ ಇಂದು ಪರಮಾಣು ಯುದ್ಧದ ಬೆದರಿಕೆ ಜಗತ್ತನ್ನು ಕಾಡುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಮಂಗಳವಾರ ಹೇಳಿದರು.

‘‘ಈ ಒಪ್ಪಂದವು ಪರಮಾಣು ಮುಕ್ತ ಜಗತ್ತನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಇಟ್ಟ ಮಹತ್ವದ ಹೆಜ್ಜೆಯಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಯೋಜನವಿಲ್ಲ: ಅಮೆರಿಕ

ಪರಮಾಣು ಅಸ್ತ್ರ ನಿಷೇಧದಿಂದ ಏನೂ ಪ್ರಯೋಜನವಿಲ್ಲ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಪರಮಾಣು ಶಕ್ತ ದೇಶಗಳ ನಿಶ್ಶಸ್ತ್ರೀಕರಣವಾಗುತ್ತದೆ ಹಾಗೂ ‘ಕೆಟ್ಟ ದೇಶ’ಗಳನ್ನು ಉತ್ತೇಜಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News