ಶ್ರೀನಿವಾಸ್ ಕಾಲೇಜಿನಲ್ಲಿ ಐಸಾಪ್-2017 ಕಾರ್ಯಕ್ರಮ

Update: 2017-09-21 18:14 GMT

 ಮುಕ್ಕ,ಸೆ.21 ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಐಸಾಪ್-2017 (ಇನ್ಫಾರ್ಮೇಶನ್ ಸರ್ಚ್, ಅನಾಲಿಸಿಸ್ ಮತ್ತು ಪ್ರಸಂಟೇಶನ್) ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಶಾಮಿಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಮೋಹನ್ ಮತ್ತು ಅದಮಾರು ಪೂರ್ಣಪ್ರಜ್ನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ರಾಮಕೃಷ್ಣ ಪೈ ಯವರು ದೀಪವನ್ನು ಬೆಳಗಿಸುವುದರೊಂದಿಗೆ ಐಸಾಪ್-2017 ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀನಿವಾಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ (ಡೀನ್) ಡಾ. ಶ್ರೀಪ್ರಕಾಶ್ ಬಿ., ಕಾಲೇಜಿನ ಉಪಪ್ರಾಂಶುಪಾಲರು ಮತ್ತು ಐಸಾಪ್-2017ರ ಸಂಚಾಲಕರಾದ ಡಾ. ರಾಮಕೃಷ್ಣ ಹೆಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಡಾ. ರಾಮಕೃಷ್ಣ ಹೆಗಡೆಯವರು ಐಸಾಪ್ ಕಾರ್ಯಕ್ರಮದ ಉದ್ಧೇಶ ಮತ್ತು ಕಳೆದ ಹಲವಾರು ವರ್ಷಗಳಿಂದ ಆಯೋಜಿಸಲ್ಪಡುತ್ತಿರುವ ಐಸಾಪ್ ಕಾರ್ಯಕ್ರಮವನ್ನು ವಿವರಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಾಯಕತ್ವ ಬೆಳವಣಿಗೆ ಮತ್ತು ಸಂವಹನ ಕೌಶಲ್ಯದ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಐಸಾಪ್ ಕಾರ್ಯಕ್ರಮವು ವೇಗವಾಗಿ ಬದಲಾಗುತ್ತಿರುವ ತಾಂತ್ರಿಕ ಕ್ಷೇತ್ರದ ಮಹತ್ತರವಾದ ವಿಷಯಗಳನ್ನು ಕ್ರೋಡೀಕರಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ವೇದಿಕೆಯನ್ನು ನಿರ್ಮಿಸುತ್ತಿದೆ ಹಾಗೂ ಸುಮಾರು 12 ಸಾವಿರಕ್ಕೂ ಅಧಿಕ ತಾಂತ್ರಿಕ ವಿಷಯಗಳನ್ನು ಐಸಾಪ್ ಕಾರ್ಯಕ್ರಮದ ಮೂಲಕ ಪ್ರಸ್ತುತಪಡಿಸಲಾಗಿದೆ ಎಂದು ಡಾ. ರಾಮಕೃಷ್ಣ ಹೆಗಡೆಯವರು ಹೇಳಿದರು. 

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿ ಪ್ರೊ. ರಾಜಮೋಹನ್ ರವರು ಒಂದು ದಿನದಲ್ಲಿ 400 ಕ್ಕೂ ಅಧಿಕ ತಾಂತ್ರಿಕ ವಿಷಯಗಳನ್ನು ಪ್ರಸ್ತುತಪಡಿಸುವ ಐಸಾಪ್ ಕಾರ್ಯಕ್ರಮ ಮತ್ತು ಅದರ ಉದ್ದೇಶಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದಿನಪತ್ರಿಕೆ, ತಾಂತ್ರಿಕ ನಿಯತಕಾಲಿಕೆಗಳು, ಮತ್ತು ವೈಜ್ನಾನಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಹೆಚ್ಚು ಹೆಚ್ಚು ಓದುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ನಾನವನ್ನು ವೃದ್ಧಿಸುವುದರ ಜೊತೆಗೆ ಸಂವಹನ ಕೌಶಲ್ಯವನ್ನು ಸುಧಾರಣೆಮಾಡಬೇಕು ಎಂದು ಹೇಳಿದರು. ಪ್ರತಿಯೊಂದು ವಸ್ತುವಿನ ವಿನ್ಯಾಸ ಮತ್ತು ರಚನೆಯಲ್ಲಿ ವಿಜ್ನಾನ ಮತ್ತು ತಾಂತ್ರಿಕತೆಯಿಂದ ಕೂಡಿದ್ದು, ವಿದ್ಯಾರ್ಥಿಗಳು ಗಮನವಿಟ್ಟು ಅಭ್ಯಾಸವನ್ನು ಮಾಡುವುದರಿಂದ ಪರಿಣತಿಯನ್ನು ಹೊಂದಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು. 

ಮುಖ್ಯ ಅತಿಥಿ ಪ್ರೊ. ಎಂ. ರಾಮಕೃಷ್ಣ ಪೈ ಯವರು ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯು ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸುವಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿದ್ದು, ಹೆತ್ತವರು ಕೂಡಾ ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಅಂಕಗಳ ಜೊತೆಗೆ ಜ್ನಾನ ಮತ್ತು ಕೌಶಲ್ಯಗಳ ಸಮಗ್ರ ಬೆಳವಣಿಗೆ ಅತ್ಯವಶ್ಯಕವಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಐಸಾಪ್ ಕಾರ್ಯಕ್ರಮವು ಉತ್ತಮವಾದ ಸಹಯೋಗವನ್ನು ನೀಡಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಅವಲಂಬಿತರನ್ನಾಗಿ ಮಾಡದೇ, ಅವರಲ್ಲಿ ಸ್ವತಂತ್ರ ಮನೋಭಾವ, ಸಂಶೋಧನಾ ಪೃವೃತ್ತಿ, ಸಂವಹನ ಕೌಶಲ್ಯ ಮತ್ತು ಯೋಚನಾ ಸಾಮರ್ಥ್ಯವನ್ನು ಬೆಳೆಸುವ ಐಸಾಪ್ ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀನಿವಾಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರನ್ನು ಅಭಿನಂದಿಸಿದರು.

ಜೀವನದಲ್ಲಿ ಯಶಸ್ಸನ್ನು ಹೊಂದಬೇಕಾದರೆ ಸೋಲನ್ನು ಸವಾಲಾಗಿ ಸ್ವೀಕರಿಸಿ, ಪ್ರತಿಬಂಧ ಮನೋಭಾವವನ್ನು ಅಳಿಸಿ, ಮುಂದೆ ಸಾಗಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ಸತತ ಏಳು ಸಲ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಅಬ್ರಹಾಂ ಲಿಂಕನ್ ರವರು ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಚುನಾವಣೆಯಲ್ಲಿ ಗೆಲುವನ್ನು ಗಳಿಸಿದ ಉದಾಹರಣೆಯನ್ನು ಪ್ರಸ್ತಾವಿಸಿದ ಪ್ರೊ. ರಾಮಕೃಷ್ಣ ಪೈ ಯವರು, ಪ್ರತಿಯೋರ್ವ ವಿದ್ಯಾರ್ಥಿಯೂ ಶೈಕ್ಷಣಿಕ ವಿಷಯಗಳಲ್ಲಿ ಆಸಕ್ತಿ ಮತ್ತು ಸಾಮಥ್ರ್ಯಗಳ ಮೂಲಕ ಉತ್ತಮ ಜ್ನಾನವನ್ನು ಹೊಂದಿ, ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಜೀವನದಲ್ಲಿ ಯಶಸ್ಸನ್ನು ಗಳಿಸುವಂತಾಗಬೇಕು ಎಂದು ಹೇಳಿದರು. 

ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದ  ಡಾ. ಶ್ರೀಪ್ರಕಾಶ್ ಬಿ. ಯವರು, ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರನ್ನು ಹುರಿದುಂಬಿಸಿ, ಪ್ರೋತ್ಸಾಹಿಸುವಲ್ಲಿ ಐಸಾಪ್ ಕಳೆದ ಹಲವರು ವರ್ಷಗಳಿಂದ ಉತ್ತಮವಾದ ಅವಕಾಶವನ್ನು ನೀಡುತ್ತಿದೆ ಎಂದು ಹೇಳಿದರು. ದ್ವಿತೀಯ ವರ್ಷದ ವಿವಿಧ ವಿಭಾಗಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸುಮೂರು 400 ಕ್ಕೂ ಅಧಿಕ ತಾಂತ್ರಿಕ ವಿಷಯಗಳನ್ನು ಸಮಗ್ರವಾಗಿ ಅಭ್ಯಸಿಸಿ, ಕೇವಲ ಒಂದು ದಿನದಲ್ಲಿ ಈ ಎಲ್ಲಾ ಸೆಮಿನಾರ್‍ಗಳನ್ನು ಪ್ರಸ್ತುತಪಡಿಸಲಿದ್ದು, ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಐಸಾಪ್ ನ ಲಾಭವನ್ನು ಪಡೆಯಬೇಕು ಎಂದು ಹೇಳಿದರು. 

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಡಾ. ಅನಿಲ್ ಕುಮಾರ್ ರವರು ಮಾತನಾಡಿ, ಇಂದಿನ ಯುವ ಪೀಳಿಗೆಯು ತಾವು ಏನನ್ನು ಕೇಳುತ್ತೇವೆಯೋ ಅದನ್ನು ನಂಬುತ್ತಾರೆ, ಬದಲಾಗಿ ಆ ವಿಷಯದ ಬಗ್ಗೆ ಅಧ್ಯಾಯ ಅಥವಾ ವಿಶ್ಲೇಷಣೆಯನ್ನು ಮಾಡುವಲ್ಲಿ ಆಸಕ್ತಿಯನ್ನು ತೋರುತ್ತಿಲ್ಲ ಎಂದು ಹೇಳಿದರು. ವಿದ್ಯಾರ್ಥಿಗಳು ಅನ್ವೇಷಣಾ ಸಾಮಥ್ರ್ಯದ ಮೂಲಕ ಜ್ನಾನವನ್ನು ಸಂಪಾದಿಸಿ, ಸಮಗ್ರ ಬೆಳವಣಿಗೆಯನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು. ಶ್ರೀನಿವಾಸ್ ವಿಶ್ವವಿದ್ಯಾಲಯವು ಜ್ನಾನ ಮತ್ತು ಕೌಶಲ್ಯಗಳ ಸಮಗ್ರ ಶಿಕ್ಷಣವನ್ನು ನೀಡಿ, ಇಂದಿನ ಉಧ್ಯೋಗ ರಂಗಕ್ಕೆ ಪರಿಪೂರ್ಣವಾದ ಇಂಜಿನಿಯರಿಂಗ್ ಪದವೀಧರರನ್ನು ರೂಪಿಸುವ ಧ್ಯೇಯವನ್ನು ಹೊಂದಿದೆ ಎಂದು ಹೇಳಿದರು. 

ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಶ್ರೀನಾಥ್ ರಾವ್ ರವರು ಸ್ವಾಗತ ಭಾಷಣವನ್ನು ಮಾಡಿದರು, ಹಾಗೂ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.  ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ಮನೋಹರಿ ಪ್ರಾರ್ಥನೆಯನ್ನು ಮಾಡಿದರು.  ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀನಾಥ್ ಪೈ ಯವರು ವಂದನಾರ್ಪಣೆ ಮಾಡಿದರು.  ಕುಮಾರಿ ಶಾನೆಲ್ ಪಿಂಟೋ ಮತ್ತು ಕುಮಾರಿ ಶೃತಿ ತಿಂಗಳಾಯ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News