ಆರೆಸ್ಸೆಸ್ ನಿಂದ ಹಿಂದೂ, ಹಿಂದಿ, ಹಿಂದೂಸ್ತಾನ ಹೇರಿಕೆ: ಪಿಣರಾಯಿ ವಿಜಯನ್

Update: 2017-09-22 13:10 GMT

ಚೆನ್ನೈ, ಸೆ. 22: ಆರೆಸ್ಸೆಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೆಸ್ಸೆಸ್ ಹಿಂದೂ, ಹಿಂದಿ, ಹಿಂದೂಸ್ತಾನದ ಏಕೀಕೃತ ವಿನ್ಯಾಸವನ್ನು ಹೇರಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ವಿಡುದಲೈ ಚಿರುತೆಗಲ್ ಕಚ್ಚಿ (ವಿಸಿಕೆ) ನಿನ್ನೆ ಇಂದಿಲ್ಲಿ ಆಯೋಜಿಸಿದ್ದ ರಾಜ್ಯ ಸ್ವಾಯತ್ತ ಸಮಾವೇಶದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಹಾಗೂ ಬಿಜೆಪಿ ಒಕ್ಕೂಟ ಪರಿಕಲ್ಪನೆ ಛದ್ರಗೊಳಿಸಲು ಪ್ರಯತ್ನಿಸುತ್ತಿದೆ ಎಂದರು.

ರಾಷ್ಟ್ರವನ್ನು ದುರ್ಬಲಗೊಳಿಸಲು ಆರೆಸ್ಸೆಸ್ ಬಯಸುತ್ತಿದೆ. ಇದರ ಭಾಗವಾಗಿ ಒಕ್ಕೂಟ ವ್ಯವಸ್ಥೆಯನ್ನು ಅತಿಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಿಂದಿ, ಹಿಂದೂ ಹಾಗೂ ಹಿಂದೂಸ್ತಾನವೆಂಬ ಏಕೀಕೃತ ವಿನ್ಯಾಸ ರೂಪಿಸಲು ಪ್ರಯತ್ನಿಸುತ್ತಿದೆ. ಹಲವು ಘಟನೆಗಳಲ್ಲಿ ಇದು ಸಾಬೀತಾಗಿದೆ ಎಂದು ಅವರು ಹೇಳಿದರು.

 ಭಾರತ ಬಹುಭಾಷೆ, ಬಹು ಸಂಸ್ಕೃತಿಯ ದೇಶ ಎಂಬುದನ್ನು ಸ್ವೀಕರಿಸಲು ಆರೆಸ್ಸೆಸ್ ಸಿದ್ಧವಿಲ್ಲ. ಅದು ಏಕ ಸಂಸ್ಕೃತಿ, ಏಕ ಭಾಷೆಯ ಪರಿಕಲ್ಪನೆ ಹೇರಲು ಪ್ರಯತ್ನಿಸುತ್ತಿದೆ. ಒಕ್ಕೂಟ ಪರಿಕಲ್ಪನೆ ಛಿದ್ರಗೊಳಿಸಲು ಆರೆಸ್ಸೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಸೂಚಿಯನ್ನು ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು.

ಮೊದಲಿಗೆ ಕಾಂಗ್ರಸ್ ಸರಕಾರ ಒಕ್ಕೂಟ ಪರಿಕಲ್ಪನೆಯನ್ನು ವಿರೋಧಿಸಿತು. ಇದರ ವ್ಯಾಪ್ತಿಯನ್ನು ಬಿಜೆಪಿ ವಿಸ್ತರಿಸಿತು. ಆದರೆ, ಸಂವಿಧಾನ ಒಕ್ಕೂಟ ಪರಿಕಲ್ಪನೆಗೆ ಪ್ರಾಮುಖ್ಯತೆ ನೀಡುತ್ತದೆ. ಪ್ರಜಾಪ್ರಭುತ್ವದೊಂದಿಗೆ ಒಕ್ಕೂಟ ಪರಿಕಲ್ಪನೆಯನ್ನು ಸಶಕ್ತಗೊಳಿಸುವ ಪ್ರಯತ್ನವನ್ನು ನಾವು ಮುಂದುವರಿಸಬೇಕು ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ರಕ್ಷಿಸಲು ಒಕ್ಕೂಟ ಹಾಗೂ ಕೇಂದ್ರ-ರಾಜ್ಯ ಸಂಬಂಧ ಮರು ಪರಿಶೀಲಿಸುವ ಅಗತ್ಯತೆ ಇದೆ ಎಂದು ಪಿಣರಾಯಿ ವಿಜಯನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News