ಪೋಲಿಯೊ ಹನಿ ಕುಡಿದ ಮಗು ಮೃತ್ಯು

Update: 2017-09-22 13:24 GMT

ಹೊಸದಿಲ್ಲಿ, ಸೆ. 22: ಬಲವಂತವಾಗಿ ಪೋಲಿಯೊ ಹನಿ ಹಾಕಿದ ಬಳಿಕ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಲುದಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.

ಮನೆ ಬಾಗಿಲಿಗೆ ತೆರಳಿ ಪೋಲಿಯೊ ನೀಡುವ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಪೋಲಿಯೊ ಹನಿ ಹಾಕಿದ ಅರ್ಧ ಗಂಟೆ ಬಳಿಕ ಮಗು ಮೃತಪಟ್ಟಿದೆ.

ಆಗ್ರಾ ಮೂಲದ ಕುಟುಂಬ ಫೌಜಿ ಮೊಹಲ್ಲಾದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿತ್ತು. ಅಲ್ಲಿಗೆ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಮಲಗಿದ್ದ ಮಗುವನ್ನು ಎಬ್ಬಿಸಿ ಪೋಲಿಯೊ ನೀಡಿದರು.

ಅರ್ಧ ಗಂಟೆ ಬಳಿಕ ಮಗುವಿನ ಬಾಯಿಯಿಂದ ನೊರೆ ಬರಲು ಆರಂಭವಾಯಿತು. ಕೂಡಲೇ ಮಗುವನ್ನು ಇಲ್ಲಿನ ಕೃಷ್ಣಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪ್ರತಿರೋಧಕ ಅಧಿಕಾರಿ ಡಾ. ಜಸ್ಬೀರ್ ಸಿಂಗ್, ನಾವು 3.75 ಲಕ್ಷ ಮಕ್ಕಳಿಗೆ ಇದೇ ಪೋಲಿಯೊ ಹನಿ ನೀಡಿದ್ದೇವೆ. ಯಾವುದೇ ಮಗುವಿಗೆ ಇಂತಹ ತೊಂದರೆ ಕಾಣಿಸಿಕೊಂಡಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News