‘ನೇಮೊದ ಬೂಳ್ಯ’ ತುಳು ಚಲನಚಿತ್ರ ಉದ್ಘಾಟನೆ
ಉಡುಪಿ, ಸೆ.22: ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಾಣಗೊಂಡ ಸತ್ಯ ಘಟನೆ ಆಧರಿತ ‘ನೇಮೊದ ಬೂಳ್ಯ’ ತುಳು ಚಲನ ಚಿತ್ರವನ್ನು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಶುಕ್ರವಾರ ಉಡುಪಿ ಡಯಾನ ಚಿತ್ರಮಂದಿರದಲ್ಲಿ ಉದ್ಘಾಟಿಸಿದರು.
ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಹ ಚಲನಚಿತ್ರಗಳಿಂದ ತುಳು ಭಾಷೆ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಸಾಧ್ಯ. ಪಾಡ್ದನ, ಸತ್ಯ ಘಟನೆ ಆಧರಿತ ಚಿತ್ರಗಳಿಂದಾಗಿ ತುಳುನಾಡಿನ ಇತಿಹಾಸವನ್ನು ಮರು ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ ಎಂದು ಡಾ.ನಿ.ಬೀ.ವಿಜಯ ಬಲ್ಲಾಳ್ ತಿಳಿಸಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ತುಳು ಭಾಷೆಯ ಬೆಳ ವಣಿಗೆಗೆ ತುಳು ಸಿನಿಮಾ ಬಹಳ ಸಹಕಾರಿಯಾಗಿದ್ದು, ತುಳು ರಂಗಭೂಮಿ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ತುಳು ಚಿತ್ರರಂಗ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ವಹಿಸಿದ್ದರು. ಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಿದಿಯೂರು ಉದಯಕುಮಾರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಕೆ.ಉದಯ ಕುಮಾರ್ ಶೆಟ್ಟಿ, ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿಗಳಾದ ತಲ್ಲೂರು ಶಿವರಾಮ ಶೆಟ್ಟಿ, ಅಮೃತ್ ಶೆಣೈ, ಎಂ. ವಿಠಲ್ ಪೈ, ಡಯಾನ ಚಿತ್ರಮಂದಿರದ ಮಾಲಕ ರವೀಂದ್ರ ಪೈ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ನಯನ ಗಣೇಶ್ ಮುಖ್ಯ ಅತಿಥಿಗಳಾಗಿದ್ದರು.
ಚಿತ್ರದ ನಿರ್ದೇಶಕ ಗಂಗಾಧರ್ ಕಿರೋಡಿಯನ್, ಕಲಾವಿದರಾದ ಪ್ರದೀಪ್ ಚಂದ್ರ ಕುತ್ಪಾಡಿ, ಶ್ರೀಪಾದ ಹೆಗಡೆ, ಪವಿತ್ರ ಶೆಟ್ಟಿ, ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.