ಪಿಡಿಒ ಗಣಪ ಮೊಗವೀರ ಅಮಾನತಿಗೆ ಜಿಲ್ಲಾ ಸಮತಾ ಸೈನಿಕ ದಳದ ಆಗ್ರಹ
ಉಡುಪಿ, ಸೆ.22: ತಾಲೂಕಿನ ಶಿರಿಯಾರ ಗ್ರಾಪಂನ ಹಿಂದಿನ ಪಿಡಿಒ ಆಗಿದ್ದ ಗಣಪ ಮೊಗವೀರ ಮೇಲೆ ಎಫ್‌ಐಆರ್ ದಾಖಲಾಗಿ ಆರೋಪ ಸಾಬೀತಾಗಿ ದೋಷಾರೋಪಣ ಪಟ್ಟಿಯನ್ನು ಕುಂದಾಪುರದ ಜೆಎಂಎಫ್‌ಸಿ ನ್ಯಾಯಾಲಯ ದಲ್ಲಿ ಸಲ್ಲಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿ ಸಿಎ ನಿಯಾಮಾವಳಿ ಸೆಕ್ಷನ್ 10ರಡಿ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಉಡುಪಿ ಜಿಲ್ಲಾ ಸಮತಾ ಸೈನಿಕ ದಳ ಉಡುಪಿ ಜಿಂಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಗಣಪ ಮೊಗವೀರ ಅವರು 9ನೇ ಶಿರಿಯಾರ ಗ್ರಾಪಂನ ಅಧ್ಯಕ್ಷರಾಗಿದ್ದ ಜ್ಯೋತಿ ಎಸ್. ಅವರ ಸಹಿಯನ್ನು ನಕಲು ಮಾಡಿ ಗ್ರಾಪಂನ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಈ ಬಗ್ಗೆ ಜ್ಯೋತಿ ಅವರು ಕೋಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಡಿವೈಎಸ್ಪಿ ಅವರು ತನಿಖೆ ನಡೆಸಿ ಗಣಪ ಮೊಗವೀರ ಅವರ ಮೇಲಿನ ಆರೋಪ ಸಾಬೀತಾಗಿರುವುದಾಗಿ ವರದಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಎಸಿಜೆ (ಕಿರಿಯ ವಿಭಾಗ) ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಕುಂದಾಪುರದಲ್ಲಿ ಆ.17ರಂದು ಸಲ್ಲಿಸಿದ್ದಾರೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ ಅವರು ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆದುದರಿಂದ ಯಾವುದೇ ಒಬ್ಬ ಸರಕಾರಿ ನೌಕರರ ಮೇಲೆ ಕ್ರಿಮಿನಲ್ ಅಪರಾಧ ಸಾಬೀತಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದಾಗ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) ನಿಯಮಗಳ ಅಡಿ ಅಮಾನತುಗೊಳಿಸಬೇಕಾಗುತ್ತದೆ. ಆದುದರಿಂದ ಹಿಂದಿನ ಶಿರಿಯಾರ ಗ್ರಾಪಂ ಪಿಡಿಒ (ಈಗ ಬಿಲ್ಲಾಡಿ ಗ್ರಾಪಂನ ಪ್ರಭಾರ) ಗಣಪ ಮೊಗವೀರ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಪಕ್ಷ ಸಿಇಓ ಅವರಿಗೆ ಮನವಿ ಸಲ್ಲಿಸಿದೆ ಎಂದವರು ನುಡಿದರು.
ಇದೇ ರೀತಿಯ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೂ ಅರ್ಪಿಸಿ ತಕ್ಷಣ ಅಮಾನತಿಗೆ ಒತ್ತಾಯಿಸಲಾಗುವುದು. 15 ದಿನದೊಳಗೆ ಪಿಡಿಒರನ್ನು ಅಮಾನತುಗೊಳಿಸದಿದ್ದರೆ ಮಣಿಪಾಲದ ಜಿಪಂ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಿ, ಸಿಎಸ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿಶ್ವನಾಥ್ ಪೇತ್ರಿ ಎಚ್ಚರಿಸಿದರು.
ಶಿರಿಯಾರ ಗ್ರಾಪಂನ ಅಧ್ಯಕ್ಷೆಯಾಗಿದ್ದ ದಲಿತ ಮಹಿಳೆ ಜ್ಯೋತಿ ಅವರ ವಿರುದ್ಧ ಗ್ರಾಪಂನ ಉಳಿದ ಸದಸ್ಯರು ಮಸಲತ್ತು ನಡೆಸಿ ಗ್ರಾಮಸಭೆ ನಡೆಯದಂತೆ ನೋಡಿಕೊಂಡಿದ್ದು ಅವರಿಗೆ ಗಣಪ ಮೊಗವೀರ ಬೆಂಬಲಿಸಿದ್ದಾರೆ. ಇದರಿಂದ ಗ್ರಾಪಂನ್ನು ಅಸಂವಿಧಾನಿಕ ರೀತಿಯಲ್ಲಿ ವಿರ್ಸಜಿಸಿದ್ದು, ಇದೀಗ ಸೆ.24ರಂದು ಅಲ್ಲಿ ಉಪಚುನಾವಣೆ ನಡೆಯುತ್ತಿದೆ ಎಂದವರು ತಿಳಿಸಿದರು.
ಈ ಚುನಾವಣೆಯಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಪರವಾಗಿ ಐದು ಮಂದಿ ಸ್ಪರ್ಧಿಸುತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಜ್ಯೋತಿ ಈ ಬಾರಿಯೂ ತನ್ನದೇ ಕ್ಷೇತ್ರದಲ್ಲಿ ಮರು ಸ್ಪರ್ಧೆ ನಡೆಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೋಶಾಧಿಕಾರಿ ಮಂಜುನಾಥ್ ಮಧುವನ್, ಶ್ರೀನಿವಾಸ್ ತೋರ್ನಾಸೆ, ಸುಬ್ಬಣ್ಣ ಅರಸಮ್ಮಖಾನ್, ರವಿರಾಜ್, ಸಂತೋಷ್ ಉಪಸ್ಥಿತರಿದ್ದರು.