ಕಳೆದ ವರ್ಷ ಮುಂಬೈಗೆ ಭೇಟಿ ನೀಡಿದ್ದ ದಾವೂದ್ ಪತ್ನಿ: ಇಕ್ಬಾಲ್ ಕಸ್ಕರ್ ಹೇಳಿಕೆ

Update: 2017-09-22 16:58 GMT

ಮುಂಬೈ, ಸೆ.22: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಪತ್ನಿ ಮೆಹಜಬಿನ್ ಶೇಖ್ ಕಳೆದ ವರ್ಷ ತನ್ನ ತಂದೆಯನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದಳು ಎಂದು ಪೊಲೀಸ್ ವಶದಲ್ಲಿರುವ ದಾವೂದ್ ಸೋದರ ಇಕ್ಬಾಲ್ ಕಸ್ಕರ್ ತಿಳಿಸಿದ್ದಾನೆ.

ಮುಂಬೈಯಲ್ಲಿ ಕುಟುಂಬದೊಂದಿಗೆ ವಾಸವಾಗಿರುವ ತನ್ನ ತಂದೆ ಸಲೀಮ್ ಕಶ್ಮೀರಿಯನ್ನು ಭೇಟಿಮಾಡಿದ ಬಳಿಕ ಮೆಹಜಬಿನ್ ಗುಪ್ತವಾಗಿ ಹಿಂದಿರುಗಿದ್ದಳು ಎಂದು ಕಸ್ಕರ್ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  ಥಾಣೆ ಪೊಲೀಸರು ಈ ವಾರದ ಆರಂಭದಲ್ಲಿ ಬಂಧಿಸಿರುವ ಕಸ್ಕರ್, ದಾವೂದ್ ಇನ್ನೂ ಪಾಕ್‌ನಲ್ಲೇ ನೆಲೆಸಿರುವುದಾಗಿ ಮಾಹಿತಿ ನೀಡಿದ್ದಾನೆ. ಅಲ್ಲದೆ ಕರಾಚಿಯಲ್ಲಿರುವ ದಾವೂದ್‌ನ ನಾಲ್ಕು ವಸತಿಗಳ ವಿಳಾಸವನ್ನೂ ಕಸ್ಕರ್ ತಿಳಿಸಿದ್ದಾನೆ. ಕರಾಚಿಯ ಅದ್ದೂರಿ ಬಂಗಲೆಯೊಂದರಲ್ಲಿ ದಾವೂದ್, ಆತನ ಸೋದರ ಅನೀಸ್ ಇಬ್ರಾಹಿಂ ಮತ್ತು ನಿಕಟ ಸಹಚರ ಛೋಟಾ ಶಕೀಲ್ ನೆಲೆಸಿದ್ದಾರೆ. ಅನೀಸ್ ಇಬ್ರಾಹಿಂ ಸಾಮಾನ್ಯವಾಗಿ ಈದ್ ಸಂದರ್ಭ ಮುಂಬೈಯಲ್ಲಿರುವ ಕುಟುಂಬ ಸದಸ್ಯರಿಗೆ ಕರೆ ಮಾಡುತ್ತಾನೆ ಎಂದು ಕಸ್ಕರ್ ತಿಳಿಸಿದ್ದಾನೆ.

ಕಳೆದ ನಾಲ್ಕು ದಿನದಿಂದ ಕಸ್ಕರ್ ವಿಚಾರಣೆ ನಡೆಸುತ್ತಿರುವ ತಂಡ ದಾವೂದ್‌ನ ಆರೋಗ್ಯಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ, ದಾವೂದ್ ‘ಸ್ವಸ್ಥ ಹಾಗೂ ಆರೋಗ್ಯವಾಗಿದ್ದು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ’ ಎಂದು ಉತ್ತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News