ಕೋಮು ಸಾಮರಸ್ಯಕ್ಕೆ ಮಾದರಿಯಾದ ‘ಶಿವಫ್ರೆಂಡ್ಸ್ ಹುಲಿಗಳು’
ಮಂಗಳೂರು, ಸೆ.22: ಕೋಮು ಸಾಮರಸ್ಯಕ್ಕೆ ಪದೇ ಪದೇ ಧಕ್ಕೆಯುಂಟಾಗುತ್ತಿರುವ ಮಂಗಳೂರಿನಲ್ಲಿಯೇ ಉತ್ಸಾಹಿ ಯುವಕರ ತಂಡವೊಂದು ಸಂಘಟಿಸುವ ಹುಲಿವೇಷ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ.
ಮಂಗಳೂರಿನ ಬರ್ಕೆಯ ಕಂಬ್ಳ ಕ್ರಾಸ್ ಪರಿಸರದ ‘ಶಿವಫ್ರೆಂಡ್ಸ್’ ತಂಡದ ಹುಲಿವೇಷಧಾರಿಗಳು ಸಾರ್ವಜನಿಕ ಪ್ರದರ್ಶನಕ್ಕೂ ಮೊದಲೇ ಸ್ಥಳೀಯ ದರ್ಗಾವೊಂದಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆ ಬಳಿಕವೇ ತಂಡದ ಅಧಿಕೃತ ಪ್ರದರ್ಶನ ಆರಂಭಗೊಳ್ಳುತ್ತದೆ. ಕಳೆದ 21 ವರ್ಷಗಳಿಂದಲೂ ತಂಡದ ಸದಸ್ಯರು ಇಂತಹ ಸಂಪ್ರದಾಯವೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಹಿಂದೂ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಶ್ರದ್ಧೆ ಮತ್ತು ಭಕ್ತಿಯನ್ನಿರಿಸಿಕೊಂಡಿರುವ ಈ ತಂಡದ ಹುಲಿವೇಷಧಾರಿಗಳು ಅಷ್ಟೇ ಭಕ್ತಿಯಿಂದ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಹುಲಿವೇಷ ಧರಿಸುವ ಮುನ್ನ ತಂಡದ ಸದಸ್ಯರು ಬೊಕ್ಕಪಟ್ಣ ಭಾರತ್ ಶಾಲೆಯಲ್ಲಿ ಹಿಂದೂ ಪದ್ಧತಿಯಂತೆ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಪೂರೈಸುತ್ತಾರೆ. ಹುಲಿವೇಷ ಧರಿಸಿದ ಬಳಿಕ ಮಠದಕಣಿಯ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಮೊದಲ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿಕ ಹುಲಿವೇಷಧಾರಿಗಳು ದರ್ಗಾಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಶಿವಫ್ರೆಂಡ್ಸ್ ಹುಲಿವೇಷ ತಂಡಕ್ಕೀಗ 23 ವರ್ಷಗಳ ಸಂಭ್ರಮ. ಈ ಬಾರಿ 40ರಿಂದ 50 ಹುಲಿವೇಷಧಾರಿಗಳನ್ನು ಕಣಕ್ಕಿಳಿಸಲಾಗುತ್ತದೆ. ಸಾಲಿಗ್ರಾಮದ ನುರಿತ ವಾದ್ಯ ತಂಡ ಇವರೊಂದಿಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ನವರಾತ್ರಿ ಆಚರಣೆ ವೇಳೆಯ ‘ನಾಲ್ಕನೆ ಮರ್ಯಾದೆ’ ಶಿವ ಫ್ರೆಂಡ್ಸ್ ಹುಲಿವೇಷ ತಂಡಕ್ಕೆ ಸಲ್ಲುತ್ತದೆ.
ಹುಲಿವೇಷ ತಂಡಕ್ಕೆ ಪ್ರೋತ್ಸಾಹ ನೀಡುತ್ತಿರುವ ನಿರ್ದಿಷ್ಟ ವ್ಯಕ್ತಿಗಳ ಮನೆಯಲ್ಲಿ ಹುಲಿವೇಷಧಾರಿಗಳು ಪ್ರದರ್ಶನ ನೀಡುತ್ತಾರೆ. ಬರ್ಕೆ, ಕಂಬ್ಳಕ್ರಾಸ್, ಬೊಕ್ಕಪಟ್ಣ ಪರಿಸರದ ಜನ ಇವರನ್ನು ಬೆಂಬಲಿಸುತ್ತಿದ್ದಾರೆ, ಕುದ್ರೋಳಿಯ ಶಾರದೋತ್ಸವ ಮೆರವಣಿಗೆಯಲ್ಲಿ 2 ಟ್ರಕ್ ಗಳಲ್ಲಿ ತಂಡದ ಹುಲಿ ವೇಷಧಾರಿಗಳು ಭಾಗವಹಿಸಲಿದ್ದಾರೆ.
ಹುಲಿವೇಷ ಪ್ರದರ್ಶನದ ಹೊರತುಪಡಿಸಿಯೂ ಶಿವಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೊಕ್ಕಪಟ್ಣದ ಭಾರತ್ ಶಾಲೆಗೆ ಹಲವು ಮೂಲಭೂತ ಸೌಕರ್ಯಗಳನ್ನು ಸಂಘಟನೆಯ ಮೂಲಕ ನೀಡಲಾಗಿದೆ.
ಇದೇ ತಂಡದ 20ನೆ ವರ್ಷಾಚರಣೆಯ ವೇಳೆ ತ್ರಿಶೂರ್ ನ ಹೆಸರಾಂತ ಕಲಾವಿದರಿಂದ ನಡೆಸಿದ ಹುಲಿವೇಷ ಪೈಂಟಿಂಗ್ ಸಾರ್ವತ್ರಿಕ ಮೆಚ್ಚುಗೆ ಗಳಿಸಿತ್ತು. ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಪ್ರತಿಷ್ಠಿತ ‘ಪದ್ಮಭೂಷಣ’ ಪ್ರಶಸ್ತಿ ದೊರೆತ ವೇಳೆ ಶಿವಫ್ರೆಂಡ್ಸ್ ತಂಡದ ಸದಸ್ಯರು ಧರ್ಮಸ್ಥಳಕ್ಕೆ ತೆರಳಿ ಹೆಗ್ಗಡೆಯವರ ಸಮ್ಮುಖದಲ್ಲಿ ಹುಲಿವೇಷ ಪ್ರದರ್ಶನ ನೀಡಿದ್ದರು.
ಶಿವಫ್ರೆಂಡ್ಸ್ ತಂಡದ ಸದಸ್ಯರು ಪ್ರಾರ್ಥನೆ ಸಲ್ಲಿಸುವ ದರ್ಗಾ ಕುದ್ರೋಳಿಯ ನಾರಾಯಣಗುರು ಕಾಲೇಜು ಬಳಿ ಇದೆ. ಕೋಮು ಸಾಮರಸ್ಯಕ್ಕೆ ಮಾದರಿಯಾಗಿರುವ ಈ ದರ್ಗಾದ ಮೇಲ್ವಿಚಾರಣೆಯನ್ನು ಸ್ಥಳೀಯ ನಿವಾಸಿ ಶಬೀರ್ ಎಂಬವರು ನೋಡಿಕೊಳ್ಳುತ್ತಿದ್ದಾರೆ.
ಕೃಪೆ: newmangaloretimes.com