ಹರ್ಷ ಮಂದರ್ ಸಂಸ್ಥೆಗೆ ಐಟಿ ನೋಟಿಸ್

Update: 2017-09-22 17:48 GMT

ಹೊಸದಿಲ್ಲಿ,ಸೆ.22: ಆದಾಯ ತೆರಿಗೆ ಇಲಾಖೆಯು ತನ್ನ ಸಂಸ್ಥೆ ‘ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್(ಸಿಇಎಸ್)’ಗೆ ನೋಟೀಸ್ ಕಳುಹಿಸಿರುವುದು ತನ್ನ ಧ್ವನಿಯನ್ನಡಗಿಸುವ ಸರಕಾರದ ಪ್ರಯತ್ನವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರು ಆರೋಪಿಸಿದ್ದಾರೆ.

2016-17ನೇ ಹಣಕಾಸು ವರ್ಷಕ್ಕೆ ರಿಟರ್ನ್‌ಗಳ ‘ಸಂಪೂರ್ಣ ಪರಿಶೀಲನೆ’ಯ ಭಾಗವಾಗಿ ಸೆ.19ರಂದು ಸಿಇಎಸ್‌ಗೆ ನೋಟಿಸನ್ನು ಜಾರಿಗೊಳಿಸಿರುವ ಐಟಿ ಇಲಾಖೆಯು ಸೆ.25ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ಐಟಿ ರಿಟರ್ನ್‌ಗೆ ಸಮರ್ಥನೆಗೆ ಅಗತ್ಯವಾಗಿರುವ ‘ಯಾವುದೇ ದಾಖಲೆ/ಮಾಹಿತಿ’ಯನ್ನು ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಸಿಇಎಸ್ ಸಲ್ಲಿಸಿರುವ ರಿಟರ್ನ್‌ನಲ್ಲಿ ಯಾವುದೇ ಉಲ್ಲಂಘನೆಯನ್ನು ಅದು ನಿರ್ದಿಷ್ಟಪಡಿಸಿಲ್ಲ.

ಶುಕ್ರವಾರ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಂದರ್, ಸಿಇಎಸ್ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಮತ್ತು ಸಕಾಲದಲ್ಲಿ ರಿಟರ್ನ್ ಸಲ್ಲಿಸಿದೆ ಎಂದು ತಿಳಿಸಿದರು. ಐಟಿ ನೋಟಿಸ್ ತನ್ನ ಬಾಯಿ ಮುಚ್ಚಿಸಲು ಸರಕಾರದ ತಂತ್ರವಾಗಿದೆ ಎಂದು ಆರೋಪಿಸಿದರು.

ಈ ನೋಟಿಸ್ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ನಡೆಯಬೇಕಾಗಿದೆ. ರಾಕೇಶ್ ಸಿನ್ಹಾರಿಂದ ಬಹಿರಂಗ ಬೆದರಿಕೆಯ ಬೆನ್ನಲ್ಲೇ ಈ ನೋಟಿಸ್ ಬಂದಿರುವುದು ಶಂಕೆಗೆ ಕಾರಣವಾಗಿದೆ. ಇದು ಭಿನ್ನಮತವನ್ನು ಅಡಗಿಸುವ ಸಿದ್ಧಮಾರ್ಗವಾಗಿದೆ ಎಂದರು.

 ಪೆಹ್ಲು ಖಾನ್ ಹಂತಕರ ವಿರುದ್ಧದ ಪ್ರಕರಣದ ಮುಗಿತಾಯ ಕುರಿತು ಸೆ.14ರಂದು ನಡೆದಿದ್ದ ಟಿವಿ ಚರ್ಚೆ ಸಂದರ್ಭ ಆರೆಸ್ಸೆಸ್ ಸಿದ್ಧಾಂತವಾದಿ ರಾಕೇಶ ಸಿನ್ಹಾ ಅವರು ಮಂದರ್ ಅವರ ಎನ್‌ಜಿಒಗಳಿಗೆ ಹಣಕಾಸು ನೆರವಿನ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದರು.

ಇಂತಹ ನೋಟಿಸ್‌ಗಳು ಮಾಮೂಲಾಗಿದ್ದು, ಗಣಕೀಕೃತ ಮಾನದಂಡಗಳಡಿ ಇವುಗಳನ್ನು ಹೊರಡಿಸಲಾಗುತ್ತದೆ. ವಾರ್ಷಿಕವಾಗಿ ಇಲಾಖೆಗೆ ಸಲ್ಲಿಕೆಯಾಗುವ ಒಟ್ಟು ರಿಟರ್ನ್‌ಗಳ ಶೇ.ಒಂದಕ್ಕೂ ಕಡಿಮೆ ಪ್ರಕರಣಗಳಲ್ಲಿ ಪರಿಶೀಲನೆ ನೋಟಿಸ್‌ಗಳನ್ನು ಕಳುಹಿಸಲಾಗುತ್ತದೆ ಎಂದು ಐಟಿ ಅಧಿಕಾರಿಯೋರ್ವರು ತಿಳಿಸಿದರು.

 ಗುಂಪುಗಳಿಂದ ಹತ್ಯೆಗಳು ನಡೆದ ಸ್ಥಳಗಳಿಗೆ ಮತ್ತು ಹತ್ಯೆಗೊಳಗಾದವರ ಕುಟುಂಬಗಳನ್ನು ತಲುಪಲು ಹಮ್ಮಿಕೊಳ್ಳಲಾದ ಶಾಂತಿ ಮತ್ತು ಏಕತೆಯ ಯಾತ್ರೆ ‘ಕಾರವಾನ್-ಎ-ಮೊಹಬ್ಬತ್’ಗೆ ಸಂಬಂಧಿಸಿದಂತೆ ಮಂದರ್ ಇತ್ತೀಚಿಗೆ ಸುದ್ದಿಯಲ್ಲಿ ದ್ದರು. ಈ ಕಾರ್ಯಕ್ರಮದ ಅಂಗವಾಗಿ ಅವರು ಕಳೆದ ಎಪ್ರಿಲ್‌ನಲ್ಲಿ ರಾಜಸ್ಥಾನದ ಆಲ್ವಾರ್‌ನಲ್ಲಿ ತಥಾಕಥಿತ ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಹರ್ಯಾಣದ ಡೇರಿ ಮಾಲಕ ಪೆಹ್ಲು ಖಾನ್‌ಗೆ ಕಳೆದ ವಾರ ಶ್ರದ್ಧಾಂಜಲಿಗಳನ್ನು ಸಲ್ಲಿಸಿದ್ದರು.

ನಾವು ಕಾರವಾನ್ ಆರಂಭಿಸಿದಾಗಲೇ ನಮ್ಮ ವಿರುದ್ಧ ಏನಾದರೂ ಕ್ರಮವನ್ನು ನಾನು ನಿರೀಕ್ಷಿಸಿದ್ದೆ. ಅವರು ನಮ್ಮ ಸಿಇಎಸ್‌ನ್ನು ಮುಚ್ಚಿದರೂ ನಾವು ಧ್ವನಿಯೆತ್ತುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಮಂದರ್ ನುಡಿದರು.

ಮಂದರ್ 2000ರಲ್ಲಿ ಆರ್ಥಿಕ ತಜ್ಞ ಜೀನ್ ಡ್ರೀಝ್, ನಿವೃತ್ತ ಅಧಿಕಾರಿ ಎನ್.ಸಿ. ಸಕ್ಸೇನಾ ಮತ್ತಿತರರೊಂದಿಗೆ ಸೇರಿ ಸಿಎಲ್‌ಎಸ್‌ನ್ನು ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News