ಕೋಮುಪ್ರಚೋದನಾಕಾರಿ ಭಾಷಣ: ಜಗದೀಶ್ ಕಾರಂತ ಬಂಧನಕ್ಕೆ ದ.ಸಂ.ಸ ಆಗ್ರಹ

Update: 2017-09-22 17:55 GMT

ಪುತ್ತೂರು, ಸೆ. 22: ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಯವರ ಮೇಲೆ ಸುಳ್ಳು ಆಪಾದನೆಗಳನ್ನು ಮಾಡಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಅವರ ವಿರುದ್ಧ ಪುತ್ತೂರು ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಅಲ್ಲಿಗೆ ನಿಲ್ಲಿಸಬಾರದು. ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಚಾಲಕ ಆನಂದ ಮಿತ್ತಬೈಲ್ ಅವರು ಸೆ. 15ರಂದು ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಪ್ಯ ಠಾಣೆಯ ಎಸ್‌ಐ ಅಬ್ದುಲ್ ಖಾದರ್ ಅವರ ವಿರುದ್ಧ ಅವಹೇಳನಕಾರಿ ಶಬ್ದಗಳನ್ನು ಪ್ರಯೋಗಿಸಲಾಗಿದೆ. ವೃತ್ತಿ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವೈಯಕ್ತಿಕ ನಿಂದನೆ ಮತ್ತು ಅವಹೇಳನ ಮಾಡಲಾಗಿದೆ. ಅಬ್ದುಲ್ ಖಾದರ್ ಅವರು ಇಸ್ಲಾಂ ಧರ್ಮಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕೆ ಈ ಪ್ರತಿಭಟನೆ ಮಾಡಲಾಗಿದೆ ಎಂದು ತಿಳಿಸಿದರು.

ಎಸ್‌ಐ ಅವರನ್ನು ಬೆತ್ತಲೆ ಮಾಡಿ ಅಟ್ಟಾಡಿಸಲಾಗುವುದು ಎಂದು ಜಗದೀಶ್ ಕಾರಂತ್ ಅವರು ಹೇಳುವ ಮೂಲಕ ಅಧಿಕಾರಿಯನ್ನು ಬೆತ್ತಲು ಮಾಡಿದ್ದಲ್ಲ, ಸಮಾಜದ ಮುಂದೆ ಸ್ವತಃ ಕಾರಂತರೇ ಬೆತ್ತಲಾಗಿದ್ದಾರೆ. ಅವರ ನಡವಳಿಕೆ ಯಾವ ಮಟ್ಟದಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ. ಅವರು ಈ ನೆಲದ ಕಾನೂನಿಗೆ ಕಿಂಚಿತ್ತೂ ಬೆಲೆ ಕೊಡುವುದಿಲ್ಲ, ಈ ದೇಶದ ಸಂವಿಧಾನಕ್ಕೂ ಬೆಲೆ ನೀಡುವುದಿಲ್ಲ ಎಂಬುದು ಅವರ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದರು.

ಪುತ್ತೂರು ಭಾಗದಲ್ಲಿ ಕೋಮು ಗಲಭೆ ನಡೆಸಲು ಸಂಘ ಪರಿವಾರ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆಸುತ್ತಿದೆ. ಇದರ ಒಂದು ಭಾಗವಾಗಿ ಜಗದೀಶ್ ಕಾರಂತ ಅವರನ್ನು ಕರೆಸಿ ಅವರಿಂದ ಕೋಮು ಪ್ರಚೋದಕ ಭಾಷಣ ಮಾಡಿಸಲಾಗಿದೆ. ಆದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಜಗದೀಶ್ ಕಾರಂತ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು. 

ಪ್ರಾಮಾಣಿಕ ಅಧಿಕಾರಿಗಳು ಯಾವುದೇ ಧರ್ಮದವರಾಗಿದ್ದರೂ ಅವರನ್ನು ಗೌರವಿಸುವ ಮನೋ ಧರ್ಮವನ್ನು ಕಾರಂತರಂತವರು ಅರ್ಥ ಮಾಡಿಕೊಳ್ಳಬೇಕು. ಜಗದೀಶ್ ಕಾರಂತ್ ಅವರು ಪುತ್ತೂರಿಗೆ ಬಂದು ಇಲ್ಲಿ ಗಲಭೆ ಹುಟ್ಟು ಹಾಕಲು ಸಂಚು ರೂಪಿಸುತ್ತಿದ್ದು, ಅದನ್ನು ಹಿಮ್ಮೆಟ್ಟಿಸಲು ನಾಗರಿಕ ಸಮಾಜ ಸನ್ನದ್ಧವಾಗಿದೆ. ನಾಗರಿಕ ಸಮಾಜ ಎಸ್‌ಐ ಅಬ್ದುಲ್ ಖಾದರ್ ಅವರ ಜತೆಗಿದೆ ಎಂದು ಆನಂದ ಮಿತ್ತಬೈಲ್ ಅವರು ತಿಳಿಸಿದರು.

ಒಂದು ವೇಳೆ ಎಸ್‌ಐ ಅವರಿಂದ ಇವರಿಗೆ ಅನ್ಯಾಯವಾಗಿದ್ದರೆ ಕಾನೂನಿನ ಅಡಿಯಲ್ಲಿ ಪ್ರತಿಭಟನೆ ಮಾಡಲಿ. ಹೀಗೆ ನೀಚತನದ ಕೆಲಸ ಮಾಡಬಾರದು. ಸಂಪ್ಯ ಎಸ್‌ಐ ಅವರು ಮತ ಧರ್ಮಗಳ ಹೆಸರಿನಲ್ಲಿ ಪಕ್ಷಪಾತ ಮಾಡುತ್ತಿಲ್ಲ. ಇತ್ತೀಚೆಗೆ ನಡೆದ ಕೆಲವು ಪ್ರಕರಣಗಳನ್ನು ಗಮನಿಸಿದಾಗ ಅವರು ಎರಡೂ ಧರ್ಮಗಳ ಆರೋಪಿಗಳ ವಿರುದ್ಧವೂ ಕೇಸು ದಾಖಲಿಸಿದ್ದಾರೆ. ಇದು ಅವರ ನಿಷ್ಪಕ್ಷಪಾತತನವನ್ನು ತೋರಿಸುತ್ತದೆ ಎಂದ ಅವರು ಜಗದೀಶ್ ಕಾರಂತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಮ್ಮ ಸಂಘಟನೆ ವತಿಯಿಂದ ಎಸ್‌ಪಿ ಮತ್ತು ಐಜಿ ಅವರಿಗೆ ಇಂದು ದೂರು ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಕೊಂಬಾರು ಗ್ರಾಮ ಸಮಿತಿ ಸಂಚಾಲಕ ದಿನೇಶ್ ಬಿ., ತಾಲೂಕು ಸಮಿತಿ ಸದಸ್ಯೆ ಗೀತಾ ಪಿ.ಐ., ತಾಲೂಕು ಸಂಘಟನಾ ಸಂಚಾಲಕ ವಿಶ್ವನಾಥ ಪುಣ್ಚತ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News