×
Ad

ಬೂತ್ ಮಟ್ಟದಿಂದ ಪಕ್ಷದ ಬಲವರ್ದನೆ: ಮುಹಮ್ಮದ್ ಕುಂಞಿ

Update: 2017-09-23 16:36 IST

ಮಂಗಳೂರು, ಸೆ. 23: ಮುಂದಿನ ಚುನಾವಣೆ ಎದುರಿಸಲು ಜೆಡಿಎಸ್ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಬೂತ್‌ಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಬಿ.ಮುಹಮ್ಮದ್ ಕುಂಞಿ ವಿಟ್ಲ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುಣಮುಖರಾದ ಕೂಡಲೇ ಮಂಗಳೂರಿಗೆ ಆಗಮಿಸಿ ಪಟ್ಟಿ ಬಿಡುಗಡೆಗೊಳಿಸುವರು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಆಹಾರ ಸಚಿವ ಯು.ಟಿ.ಖಾದರ್ ಜಿಲ್ಲೆಯ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ನೀಡು ತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಸಮರ್ಥರಾಗಿದ್ದಾರೆ. ಒಂದೆಡೆ ಕೃಷಿಕರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮುಂದಿನ ಚುನಾವಣೆಯಲ್ಲಿ ಈ ಸಚಿವರಿಬ್ಬರೂ ಸೋಲುವುದು ಖಚಿತ. ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಉಳ್ಳಾಲ ಮತ್ತು ಬಂಟ್ವಾಳದಲ್ಲಿ ಜೆಡಿಎಸ್ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಸ್ಪರ್ಧೆಯೊಡ್ಡಲಿದೆ ಎಂದವರು ಹೇಳಿದರು.

ಸುಳ್ಯ, ಬೆಳ್ತಂಗಡಿಲ್ಲಿ ಕೃಷಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರಕಾರ ತಕ್ಷಣ ಅಧಿಕಾರಿಗಳನ್ನು ಕಳಿಸಿ ಈ ಭಾಗದ ಕೃಷಿಕರ ಸಮಸ್ಯೆಯನ್ನು ಆಲಿಸಬೇಕು ಎಂದು ಮುಹಮ್ಮದ್ ಕುಂಞಿ ಒತ್ತಾಯಿಸಿದರು.

ಗ್ರೆಸ್ ಮತ್ತು ಬಿಜೆಪಿ ರ್ಯಾಲಿ, ಪ್ರತಿಭಟನೆಯ ಮೂಲಕ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ ವಿನಃ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಒಂದೆಡೆ ತೈಲ ಬೆಲೆ ಏರಿಕೆ ಮಾಡಿ ಕೇಂದ್ರ ಸರಕಾರ ಜನತೆಯ ಮೇಲೆ ಹೊರೆ ಹೊರಿಸಿದೆ. ಇಂತಹ ಸಮಸ್ಯೆಗಳ ವಿರುದ್ಧ ಪ್ರತಿಭಟನೆಗಳಾಗುತ್ತಿಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೋರೇಟರ್‌ಗಳಾದ ಅಝೀಝ್ ಕುದ್ರೋಳಿ, ರಮೀಝಾ, ಪಕ್ಷದ ಪ್ರಮುಖರಾದ ಮುನೀರ್ ಮುಕ್ಕಚ್ಚೇರಿ, ರಕ್ಷಿತ್ ಸುವರ್ಣ, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News