×
Ad

‘ಜಯಲಲಿತಾರ ಆರೋಗ್ಯ ಸ್ಥಿತಿಯ ಬಗ್ಗೆ ನಾವೆಲ್ಲ ಸುಳ್ಳು ಹೇಳಿದ್ದೆವು’

Update: 2017-09-23 18:01 IST

ಚೆನ್ನೈ,ಸೆ.23: ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ತಮಿಳುನಾಡು ಅರಣ್ಯ ಸಚಿವ ಸಿ.ಶ್ರೀನಿವಾಸನ್ ಅವರು ಜನತೆಯ ಕ್ಷಮೆ ಕೋರಿದ್ದಾರೆ.

ಶುಕ್ರವಾರ ರಾತ್ರಿ ಮದುರೈನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,‘‘ಜಯಲಲಿತಾ ಇಡ್ಲಿಗಳನ್ನು ತಿಂದರು, ಜನರು ಅವರನ್ನು ಭೇಟಿಯಾದರು ಎಂದೆಲ್ಲ ಸುಳ್ಳುಗಳನ್ನು ನಾವು ಹೇಳಿದ್ದೆವು. ಸತ್ಯವೇನೆಂದರೆ ಅವರನ್ನು ಯಾರೂ ನೋಡಿಯೇ ಇರಲಿಲ್ಲ. ಈ ಸುಳ್ಳುಗಳಿಗಾಗಿ ನಾನೀಗ ಜನರ ಕ್ಷಮೆ ಯಾಚಿಸುತ್ತಿದ್ದೇನೆ’’ ಎಂದರು.

ಸರಕಾರ ಮತ್ತು ಆಡಳಿತ ಎಐಎಡಿಎಂಕೆ ಪಕ್ಷದ ಪ್ರತಿಯೊಬ್ಬರೂ ಜಯಲಲಿತಾರ ಬಗ್ಗೆ ಸುಳ್ಳುಗಳನ್ನು ಹೇಳಿಕೊಂಡು ಬಂದಿದ್ದರು. ರಾಷ್ಟ್ರೀಯ ನಾಯಕರಿಗೂ ಜಯಲಲಿತಾ ಭೇಟಿಗೆ ಅವಕಾಶವಿರಲಿಲ್ಲ. ಅವರನ್ನು ಅಪೋಲೊ ಆಸ್ಪತ್ರೆಯ ಮುಖ್ಯಸ್ಥ ಪ್ರತಾಪ ರೆಡ್ಡಿಯವರ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗುತ್ತಿತ್ತು. ಎಐಎಡಿಎಂಕೆ ಸಚಿವರು ಸಹ ಅದೇ ಕೋಣೆಯಲ್ಲಿ ಕುಳಿತಿರಬೇಕಿತ್ತು ಎಂದ ಅವರು, ಪಕ್ಷದ ಗುಟ್ಟುಗಳು ಸೋರಿಕೆಯಾಗಬಾರೆಂದು ನಾವೆಲ್ಲ ಆಗ ಸುಳ್ಳುಗಳನ್ನು ಹೇಳಿದ್ದೆವು ಎಂದರು.

ಜಯಲಲಿತಾರನ್ನು ಆಸ್ಪತ್ರೆಯ ಅವರ ಕೋಣೆಯಲ್ಲಿ ಅವರ ಆಪ್ತ ಸ್ನೇಹಿತೆ ವಿ.ಕೆ ಶಶಿಕಲಾ ಮಾತ್ರ ಭೇಟಿಯಾಗುತ್ತಿದ್ದರು. ಬೇರೆ ಯಾರಿಗೂ ಅವರನ್ನು ಭೇಟಿಯಾಗುವ ಅವಕಾಶವಿರಲಿಲ್ಲ ಎಂದು ಶ್ರೀನಿವಾಸನ್ ತಿಳಿಸಿದರು.

ಶ್ರೀನಿವಾಸನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಶಶಿಕಲಾರ ಸಂಬಂಧಿ ಟಿಟಿವಿ ದಿನಕರನ್ ಅವರು, ವೈದ್ಯರ ಸೂಚನೆಯ ಮೇರೆಗೆ ಶಶಿಕಲಾ ಕೇವಲ ಎರಡು ನಿಮಿಷ ಜಯಲಲಿತಾ ಕೋಣೆಗೆ ತೆರಳುತ್ತಿದ್ದರು. ಅ.1ರ ನಂತರ ಅವರಿಗೂ ಅನುಮತಿ ನಿರಾಕಕರಿಸಲಾಗಿತ್ತು ಎಂದು ತಿಳಿಸಿದರು.

 ಅನಾರೋಗ್ಯದಿಂದಾಗಿ ಕಳೆದ ವರ್ಷದ ಸೆ.22ರಂದು ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಡಿ.5ರಂದು ಕೊನೆಯುಸಿರೆಳೆದಿದ್ದರು. ಆ ಅವಧಿಯಲ್ಲಿ ಸರಕಾರ ಮತ್ತು ಆಸ್ಪತ್ರೆ ಅವರ ದೇಹಸ್ಥಿತಿಯ ಬಗ್ಗೆ ಅಪರೂಪಕ್ಕೆ ಮಾಹಿತಿಗಳನ್ನು ಪ್ರಕಟಿಸುತ್ತಿದ್ದವು. ಹೆಚ್ಚಿನ ಮಾಹಿತಿಗಳು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದೇ ತಿಳಿಸಿದ್ದವು.

ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧಿಶರ ನೇತೃತ್ವದ ವಿಚಾರಣಾ ಆಯೋಗ ವೊಂದು ಜಯಲಲಿತಾರ ಸಾವಿನ ಕುರಿತು ತನಿಖೆ ನಡೆಸಲಿದೆ ಎಂದು ಸರಕಾರವು ಈಗಾಗಲೇ ಪ್ರಕಟಿಸಿದೆ.

ಜಯಲಲಿತಾ ನಿಧನರಾದಾಗಿನಿಂದಲೂ ಅವರ ಸಾವಿನ ಕುರಿತು ಶಂಕೆಗಳು ವ್ಯಕ್ತವಾಗು ತ್ತಿದ್ದು, ಟೀಕಾಕಾರರು ಈಗ ಜೈಲಿನಲ್ಲಿರುವ ಶಶಿಕಲಾರತ್ತ ಬೆಟ್ಟು ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News