ಆರ್ಥಿಕತೆ ತಳಮಟ್ಟಕ್ಕೆ ಕುಸಿದಿದೆ,ಇಲ್ಲಿಂದ ಚೇತರಿಕೆ ಮಾತ್ರ ಸಾಧ್ಯ:ಗುರುಮೂರ್ತಿ
ಚೆನ್ನೈ,ಸೆ.23: ದೇಶದ ಆರ್ಥಿಕತೆಯು ಸಂಪೂರ್ಣವಾಗಿ ನೆಲ ಕಚ್ಚಿದ್ದು, ಸರಕಾರದ ಹಸ್ತಕ್ಷೇಪದ ತುರ್ತು ಅಗತ್ಯವಿದೆ ಎಂದು ಆರ್ಥಿಕ ವ್ಯಾಖ್ಯಾನಕಾರ ಹಾಗೂ ತುಘ್ಲಕ್ ಮ್ಯಾಗಝಿನ್‌ನ ಸಂಪಾದಕ ಎಸ್.ಗುರುಮೂರ್ತಿ ಅವರು ಅಭಿಪ್ರಾಯಿಸಿದ್ದಾರೆ.
ಇಲ್ಲಿಯ ಮದ್ರಾಸ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ನೋಟು ಅಮಾನ್ಯ-ಅದರ ಪಾತ್ರ,ಪರಿಣಾಮ ಮತ್ತು ಅನುಸರಣೆ’ ಕುರಿತು ಮಾತನಾಡುತ್ತಿದ್ದ ಅವರು, ದೇಶದ ಆರ್ಥಿಕತೆ ಸಂಪೂರ್ಣವಾಗಿ ತಳ ಕಚ್ಚಿದೆ ಎಂದು ತಾನು ಭಾವಿಸಿದ್ದೇನೆ ಮತ್ತು ಇದೇ ಸ್ಥಿತಿ ಮುಂದುವರಿಯಲು ಅವಕಾಶವಿಲ್ಲ. ಹೀಗಾಗಿ ಎನ್‌ಪಿಎ ನಿಯಮಾವಳಿಗಳು, ಮುದ್ರಾ ನಿರ್ಣಯ ಇವೆಲ್ಲವೂಗಳು ಬೇಕೇ ಎನ್ನುವುದರ ಬಗ್ಗೆ ಸರಕಾರವು ನಿರ್ಧಾರವನ್ನು ತೆಗೆದುಕೊಳ್ಳಬೇಕು. ಮುಂದಿನ ಆರು ತಿಂಗಳುಗಳಲ್ಲಿ ಇಂತಹ 2-3 ನಿರ್ಧಾರಗಳನ್ನು ತೆಗೆದುಕೊಂಡರೆ ಆರ್ಥಿಕತೆಯು ಹಳಿಗೆ ಮರಳಬಹುದಾಗಿದೆ. ಸೂಕ್ತ ನೀತಿಯನ್ನು ರೂಪಿಸಿದರೆ ಆರ್ಥಿಕತೆ ತಕ್ಷಣವೇ ಚಿಗಿತುಕೊಳ್ಳುತ್ತದೆ ಎಂದು ತನಗೆ ನಂಬಿಕೆಯಿದೆ ಎಂದು ಹೇಳಿದರು.
ಸುಧಾರಿಸಿಕೊಳ್ಳಲು ಅವಕಾಶವೇ ಇಲ್ಲದಂತೆ ಒಂದರ ಹಿಂದೊಂದರಂತೆ ವ್ಯತ್ಯಯ ಗಳನ್ನು ನಾವು ಕಂಡಿದ್ದೇವೆ. ಇದು ಅವಸರದಲ್ಲಿರುವ ಸರಕಾರದ ಕಾರ್ಯವಾಗಿದೆ. ನೋಟು ಅಮಾನ್ಯ, ಎನ್‌ಪಿಎ ನಿಯಮಗಳು, ದಿವಾಳಿ ಕಾನೂನು, ಜಿಎಸ್‌ಟಿ, ಕಪ್ಪುಹಣದ ವಿರುದ್ಧ ಒತ್ತು ಇವೆಲ್ಲ ನಿರ್ಧಾರಗಳನ್ನು ಒಂದೇ ಏಟಿಗೆ ತೆಗೆದುಕೊಳ್ಳಲಾಗಿತ್ತು. ಈ ಎಲ್ಲವನ್ನೂ ಹೀರಿಕೊಳ್ಳುವ ಶಕ್ತಿ ಆರ್ಥಿಕತೆಗೆ ಇಲ್ಲ ಎಂದರು.
ತಾನಿಲ್ಲಿ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಗುರುಮೂರ್ತಿ, ನೋಟು ಅಮಾನ್ಯ ಕ್ರಮವು ಹಲವಾರು ಪ್ರಯೋಜನಗಳನ್ನು ಹೊಂದಿತ್ತಾದರೂ ಅದನ್ನು ಅನುಷ್ಠಾನಗೊಳಿಸಿದ್ದ ಕ್ರಮ ಕೆಟ್ಟದಾಗಿತ್ತು. ವಿತ್ತ ಸಚಿವಾಲಯ ಮತ್ತು ರಹಸ್ಯ ಘಟಕವೊಂದರ ನಡುವೆ ಸಂವಹನೆಯ ತಪ್ಪಿನಿಂದಾಗಿ ಕಪ್ಪುಹಣ ಖದೀಮರು ನೋಟು ಅಮಾನ್ಯ ಬಲೆಯಿಂದ ಪಾರಾದರು ಎಂದರು.
ನೋಟು ಅಮಾನ್ಯ ಕ್ರಮದಿಂದ ನಗದು ಕೊರತೆಯಿಂದಾಗಿ ಶೇ.90ರಷ್ಟು ಉದ್ಯೋಗ ಗಳನ್ನು ಸೃಷ್ಟಿಸುವ ಮತ್ತು ತನ್ನ ಶೇ.95ರಷ್ಟು ಹಣಕಾಸು ಅಗತ್ಯವನ್ನು ಬ್ಯಾಂಕ್ ವ್ಯವಸ್ಥೆಯ ಹೊರಗಿನಿಂದ ಪಡೆದುಕೊಳ್ಳುವ ಅನೌಪಚಾರಿಕ ಕ್ಷೇತ್ರವು ಭಾರೀ ಹೊಡೆತ ತಿನ್ನುವಂತಾ ಯಿತು. ಪರಿಣಾಮವಾಗಿ ಒಟ್ಟು ಬಳಕೆ ಮತ್ತು ಉದ್ಯೋಗ ಸೃಷ್ಟಿ ಕುಂಠಿತಗೊಂಡಿದೆ. ಅನೌಪಚಾರಿಕ ಕ್ಷೇತ್ರವು ಈಗ ಶೇ.360-400 ಬಡ್ಡಿದರದಲ್ಲಿ ಸಾಲ ಪಡೆದುಕೊಂಡು ಬದುಕಲು ಹೆಣಗಾಡುತ್ತಿದೆ. ಇದು ನಮ್ಮ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದ್ದು, ಇದು ಮುಂದುವರಿಯಲಿದೆ ಎಂದು ಗುರುಮೂರ್ತಿ ಹೇಳಿದರು.
ರಾಜಕೀಯ ನಾಯಕತ್ವವನ್ನು ನೇರವಾಗಿ ಟೀಕಿಸಲು ಅವರು ನಿರಾಕರಿಸಿದರಾದರೂ ಆರ್ಥಿಕತೆಯ ವೈಫಲ್ಯಗಳಿಗೆ ಆರ್‌ಬಿಐನ್ನು ಬೆಟ್ಟು ಮಾಡಿದರು. ಮುದ್ರಾ ಯೋಜನೆ ಯನ್ನು ಅನುಷ್ಠಾನಿಸುವಲ್ಲಿ ಸರಕಾರವು ದಯನೀಯವಾಗಿ ವಿಫಲಗೊಂಡಿತ್ತು. ಅದನ್ನು ಸರಿಪಡಿಕೊಂಡ ಬಳಿಕವೇ ಅದು ನೋಟು ಅಮಾನ್ಯ ಕ್ರಮಕ್ಕೆ ಮುಂದಾಗಬೇಕಿತ್ತು. ಅದು ಮೂಲ ಕಾರ್ಯತಂತ್ರವಾಗಿತ್ತು. ಆದರೆ ಹಣಕಾಸು ಕ್ಷೇತ್ರದ ಮೇಲಿನ ತನ್ನ ನಿಯಂತ್ರಣವನ್ನು ಬಿಟ್ಟುಕೊಡಲು ಬಯಸಿರದ ಆರ್‌ಬಿಐ ಮುದ್ರಾ ಬ್ಯಾಂಕ್‌ಗೆ ತಡೆಯ ನ್ನೊಡ್ಡಿತ್ತು ಎಂದರು.
ನೋಟು ಅಮಾನ್ಯವು ಹಲವಾರು ಗುರಿಗಳನ್ನು ಹೊಂದಿತ್ತಾದರೂ ಸರಕಾರದ ಮೇಲೆ ರಾಜಕೀಯ ಒತ್ತಡಗಳಿಂದಾಗಿ ಅದು ಚಲಾವಣೆಯಲ್ಲಿರುವ ಕಪ್ಪುಹಣಕ್ಕೆ ಅಂತ್ಯ ಹಾಡುವ ಒಂದೇ ಗುರಿಗೆ ತಗ್ಗಿತ್ತು. ಸರಕಾರದೊಳಗೇ ಸಮನ್ವಯದ ಕೊರತೆಯಿಂದಾಗಿ ನೋಟು ಅಮಾನ್ಯ ಯೋಜನೆಯು ಭಾರೀ ದೋಷದಿಂದ ಕೂಡಿತ್ತು. ನೋಟು ಅಮಾನ್ಯ ಮತ್ತು ಆದಾಯ ಬಹಿರಂಗ ಯೋಜನೆಯನ್ನು ಏಕಕಾಲಕ್ಕೆ ಪ್ರಕಟಿಸಬೇಕೆಂಬ ಸಲಹೆಯನ್ನು ಸರಕಾರವು ಪಡೆದಿತ್ತು. ಆದರೆ ವ್ಯವಸ್ಥೆಯೊಳಗಿನ ಸಂವಹನ ಕೊರತೆಯಿಂದಾಗಿ ಆದಾಯ ಬಹಿರಂಗ ಯೋಜನೆಯನ್ನು ಮೊದಲು ಮತ್ತು ನೋಟು ಅಮಾನ್ಯವನ್ನು ನಂತರ ಘೋಷಿ ಸಲಾಗಿತ್ತು. ಹೀಗಾಗಿ ನೋಟು ಅಮಾನ್ಯ ಕ್ರಮ ಅಕ್ಷರಶಃ ಗ್ಯಾಸ್ ಚೇಂಬರ್ ಆಗಿತ್ತು ಮತ್ತು ಅದು ಮೊದಲ ಪ್ರಮುಖ ವ್ಯೆಹಾತ್ಮಕ ತಪ್ಪು ಆಗಿತ್ತು. ತೆರಿಗೆಯನ್ನು ಮುಂಗಡವಾಗಿ ಸಂಗ್ರಹಿಸುವ ಬದಲು ಸರಕಾರವು ಈಗ ತೆರಿಗೆಗಳನ್ನು ಸಂಗ್ರಹಿಸಲು ಕಪ್ಪುಹಣದ ಹಿಂದೆ ಬಿದ್ದಿದೆ ಎಂದರು.