ಜಲೀಲ್ ಕರೋಪಾಡಿ ಕೊಲೆ ಪ್ರಕರಣ: ಸಿಐಡಿ ತನಿಖೆಗೆ ಹಸ್ತಾಂತರ
ಬಂಟ್ವಾಳ, ಸೆ. 23: ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಕಾಂಗ್ರೆಸ್ ನಾಯಕ ಎ. ಅಬ್ದುಲ್ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅಬ್ದುಲ್ ಜಲೀಲ್ ಕೊಲೆ ಪ್ರಕರಣವು ಸಂಘಟಿತವಾದ ಪೂರ್ವಯೋಜಿತ ಕೃತ್ಯ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಆದರೆ ತನಿಖಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದ ನಿರ್ಧಿಷ್ಟ ಸಾಕ್ಷ್ಯ ಸಂಗ್ರಹಿಸುವಲ್ಲಿ ಗೊಂದಲಕ್ಕೀಡಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
2017ರ ಎಪ್ರಿಲ್ 20ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ನಾಲ್ಕು ಬೈಕ್‌ಗಳಲ್ಲಿ ಬಂದ 8 ಮಂದಿಯ ತಂಡ ಕರೋಪಾಡಿ ಗ್ರಾಮ ಪಂಚಾಯತ್ ಕಚೇರಿಯ ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿಯೊಳಗೆ ಕರ್ತವ್ಯದಲ್ಲಿದ್ದ ಅಬ್ದುಲ್ ಜಲೀಲ್ ಕರೋಪಾಡಿಯವರನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿತ್ತು.
ಘಟನೆ ನಡೆದ ಆರಂಭದಲ್ಲಿ ಪ್ರಕರಣದ ನೈಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರುತ್ತಿದ್ದು, ಈ ಹಿಂದೆ ಕೆಲವು ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಫಿಕ್ಸ್ ಮಾಡಲಾಗುತ್ತಿದೆ ಎಂಬ ಆರೋಪ ಕುಟುಂಬಸ್ಥರಿಂದ ಹಾಗೂ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಎಪ್ರಿಲ್ 30ರಂದು 11 ಮಂದಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಕೆಲವು ದಿನಗಳ ಬಳಿಕ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದರು.
ಸರ್ವ ಧರ್ಮಗಳ ಪ್ರೀತಿಗೆ ಪಾತ್ರವಾಗಿದ್ದ ಜಲೀಲ್ ಕರೋಪಾಡಿಯವರನ್ನು ಅಧಿಕಾರ ಹಾಗೂ ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ. ಕೊಲೆಯಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ, ಕರೋಪಾಡಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಶೆಟ್ಟಿ ಹಾಗೂ ಇತರ ಇಬ್ಬರ ಪಾತ್ರ ಇದ್ದು ಅವರನ್ನು ಪೊಲೀಸ್ ಇಲಾಖೆ ರಕ್ಷಿಸುತ್ತಿದೆ ಎಂದು ಮೃತರ ತಂದೆ, ಬಂಟ್ವಾಳ ತಾಲೂಕು ಪಂಚಾಯತ್ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.