×
Ad

ಸಿದ್ದರಾಮಯ್ಯ ಉತ್ತಮ, ಮೋದಿ ಅಧಮ: ಕಾಂಗ್ರೆಸ್ ಸಮಾವೇಶದಲ್ಲಿ ವಿಷ್ಣುನಾಥ್

Update: 2017-09-23 20:54 IST

ಬಂಟ್ವಾಳ, ಸೆ. 23: ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯರವರು ಉತ್ತಮ. ಸುಳ್ಳನ್ನೇ ಬಂಡವಾಳವನ್ನಾಗಿಸಿದ ಪ್ರಧಾನಿ ನರೇಂದ್ರ ಮೋದಿ ಅಧಮ ಎಂದು ಎಐಸಿಸಿ ಕಾರ್ಯದರ್ಶಿ ಪಿ.ಎಸ್. ವಿಷ್ಣುನಾಥ್ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ವತಿಯಿಂದ ನಡೆದ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಸಿದ್ದರಾಮಯ್ಯ ಅವರು ಹಲವಾರು ಭಾಗ್ಯಗಳನ್ನು ನೀಡುವುದರ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಿರುವ 159 ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದ ಅವರು ಪ್ರಧಾನಿ ಮೋದಿ ಕಪ್ಪುಹಣ ತರುವುದಾಗಿ ಹೇಳಿದವರು ಇನ್ನು ತರಲಿಲ್ಲ, ಕೇವಲ ಮಾತಿನಲ್ಲಿಯೇ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಎಲ್ಲ ವರ್ಗದ ಜನರನ್ನು ಸಮಾನಾಗಿ ಕಾಣುವ ರಮಾನಾಥ ರೈ ಅವರು ಜಾತ್ಯಾತೀತ ನಿಲುವಿನ ವ್ಯಕ್ತಿಯಾಗಿದ್ದು,ಅವರ ಬೆನ್ನಿಗೆ ಕಾಂಗ್ರಸ್ ನಿಲ್ಲಲಿದೆ ಎಂದು ಈ ಸಂದರ್ಭ ಅವರು ಆಶ್ವಾಸನೆ ನೀಡಿದರು.

ನನ್ನ ರಾಜೀನಾಮೆಯನ್ನು ಕೋಮುವಾದಿ ಸಿದ್ಧಾಂತ ಇರುವ ಪಕ್ಷಗಳು ಕೇಳುತ್ತವೆ. ಯಾಕೆ ನಾನು ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ ಸಚಿವ ಬಿ.ರಮಾನಾಥ ರೈ, ಒಂದು ವೇಳೆ ನನ್ನದೇ ಪಕ್ಷದ ಕಾರ್ಯಕರ್ತರು ಕೇಳಿದರಷ್ಟೇ ನೀಡುತ್ತೇನೆ ಎಂದರು. ಏಳನೇ ಬಾರಿ ವಿಧಾನಸಭೆಗೆ ಪ್ರವೇಶಿಸಲು ಪಕ್ಷ, ಕಾರ್ಯಕರ್ತರು, ಜನರ ಆಶೀರ್ವಾದ ಬೇಕು ಎಂದ ಅವರು, ನನಗೆ ಕ್ಷೇತ್ರದ ಜನತೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹರೀಶ್ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು.ಶಾಸಕ ಮೊಯ್ದಿನ್ ಬಾವ, ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ರಾಜಕುಮಾರ್, ಮುಖಂಡರಾದ ಬಿ.ಎಚ್.ಖಾದರ್, ಪಿಯೂಸ್ ಎಲ್. ರೋಡ್ರಿಗಸ್, ಹಾಜಿ ಮೋನು, ಎ.ಸಿ.ಭಂಡಾರಿ, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ನವೀನ್ ಡಿಸೋಜ, ಕೋಡಿಜಾಲ್ ಇಬ್ರಾಹಿಂ, ಚಂದ್ರಹಾಸ ಕರ್ಕೇರ, ಮಿಥುನ್ ರೈ, ಕರೀಂ, ರಾಮಕೃಷ್ಣ ಆಳ್ವ, ಲುಕ್ಮಾನ್, ಜನಾರ್ದನ ಚಂಡ್ತಿಮಾರ್, ಪ್ರಶಾಂತ್ ಕುಲಾಲ್, ಸದಾಶಿವ ಬಂಗೇರ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಧನಲಕ್ಷ್ಮೀ ಬಂಗೇರ, ಸುರೇಂದ್ರ ಕಂಬಳಿ, ಕುಂಞ ಮೋನು, ಮಲ್ಲಿಕಾ ಪಕ್ಕಳ, ಮಂಜುಳಾ ಮಾವೆ, ಲಾವಣ್ಯ ಬಲ್ಲಾಳ್, ಹಿತಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು. ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ವಂದಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಮತ್ತು ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

ತುಘಲಕ್‌ಗೆ ಇನ್ನೊಂದು ಹೆಸರು ಮೋದಿ ಎಂದು ಅವರು, ಕೋಮು ಆಧಾರದಲ್ಲಿ ಬಿಜೆಪಿಯವರು ವಿಭಜನೆಯ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಸವಣ್ಣನ ನಾಡಾದ ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದರು.

ಅ. 24ರಂದು ಸಾಮರಸ್ಯದ ನಡಿಗೆ
ಅಕ್ಟೋಬರ್ ಮೊದಲ ವಾರದಲ್ಲಿ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯದ ನಡಿಗೆ ನಡೆಯಲಿದೆ. ಬಿಜೆಪಿ, ಎಸ್‌ಡಿಪಿಐಗೆ ಇದರಲ್ಲಿ ಅವಕಾಶವಿಲ್ಲ, ಜಾತ್ಯತೀತ ಮನಸ್ಸುಗಳಿಗಷ್ಟೇ ಇಲ್ಲಿ ಅವಕಾಶ ಎಂದರು.

ನಳಿನ್ ನಂ.1 ಆದರೆ ಉಳಿದವರು ಹೇಗೆ
ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡುವ ಸಂಸದ ನಳಿನ್ ಕುಮಾರ್ ಕಟೀಲ್ ನಂ.1 ಸಂಸದ ಎಂದು ಹೇಳುತ್ತಿದ್ದಾರೆ. ಹಾಗಾದರೆ ಉಳಿದವರ ಸ್ಥಿತಿ ಹೇಗೆ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News