×
Ad

ಹಿಂಸೆ ಪ್ರಚೋದಿಸುವ ಸಂಘಟನೆ ಸಮಾಜಕ್ಕೆ ಅನಿವಾರ್ಯವಲ್ಲ: ಪ್ರಮೋದ್ ಮಧ್ವರಾಜ್

Update: 2017-09-23 22:05 IST

ಉಡುಪಿ, ಸೆ.23: ವಿದ್ಯಾರ್ಥಿ ಸಮೂಹವನ್ನು ಹಿಂಸಾತ್ಮಕ ಕೃತ್ಯಕ್ಕೆ ಪ್ರಚೋದಿಸಿ, ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸುವ ಸಂಘಟನೆಯ ಅಗತ್ಯ ಸಮಾಜಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ರಾಮ್ ಸೇನಾ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಘಟನೆಯನ್ನು ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಮ್ ಸೇನಾ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಘಟನೆಯನ್ನು ಮಣಿಪಾಲದ ಆರ್‌ಎಸ್‌ಬಿ ಸಾಭಾ ಭವನದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇದಕ್ಕೆ ಬದಲಾಗಿ ಯುವ ಶಕ್ತಿಯನ್ನು ಒಟ್ಟು ಸೇರಿಸಿ ಬಲಿಷ್ಠ ದೇಶ ಕಟ್ಟಿ, ಸಮಾಜದ ಸ್ವಾಸ್ಥವನ್ನು ಕಾಪಾಡುವ ಸಂಘಟನೆಯ ಅನಿವಾರ್ಯ ಇಂದು ದೇಶಕ್ಕಿದೆ ಎಂದು ಪ್ರಮೋದ್ ಮಧ್ವರಾಜ್ ವಿವರಿಸಿದರು.

ದೇಶದಲ್ಲಿ ಅತಿ ಹೆಚ್ಚು ಶಕ್ತಿ ಇರುವ ವಿದ್ಯಾರ್ಥಿ ಸಮೂಹ, ಮನಸ್ಸು ಮಾಡಿದರೆ ಎಲ್ಲಾ ಕೆಲಸ ಸಾಧ್ಯವಾಗುತ್ತದೆ. ಈ ವಿದ್ಯಾರ್ಥಿ ಶಕ್ತಿಯನ್ನು ಪೂರಕವಾಗಿ ಬಳಸಿಕೊಂಡು ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕೆ ಹೊರತು ಕಾನೂನು ಕೈಗೆತ್ತಿಕೊಂಡು ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದ ಅವರು, ಪ್ರಸ್ತುತ ನಮ್ಮ ಪೊಲೀಸ್ ಇಲಾಖೆ ಸೃದಢವಾಗಿದ್ದು, ಕಾನೂನು ಕೈಗೆತ್ತಿಕೊಂಡರೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲೆಯ ಖಾಸಗಿ ಬಸ್‌ಗಳ ಲಾಭಿಯ ವಿರೋಧ ಕಟ್ಟಿಕೊಂಡು ನರ್ಮ್ ಬಸ್ ಸೌಲಭ್ಯಗಳನ್ನು ಒದಗಿಸಿದ್ದೇನೆ. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗೆ ನಾನು ಯಾವಾಗಲೂ ಸ್ಪಂದಿಸುತ್ತೇನೆ. ಶಿಕ್ಷಣ ಇಲಾಖೆಯಿಂದ, ವಿವಿಯಿಂದ ಯಾವುದೇ ತೊಂದರೆ ಆದರೂ ಕಚೇರಿಗೆ ಬಂದು ದೂರು ನೀಡಿ, ಪೂರಕವಾಗಿ ಸ್ಪಂದಿಸಿ, ನ್ಯಾಯ ನೀಡುವುದಾಗಿ ಭರವಸೆ ನೀಡಿದರು.

ಶೀರೂರು ಮಠದ ಶ್ರೀಲಕ್ಷ್ಮಿವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ರಾಮ್ ಸೇನಾ ಕರ್ನಾಟಕದ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉದ್ಯಮಿ ಉದಯ್ ಶೆಟ್ಟಿ ಮುನಿಯಾಲು, ಜಿಪಂ ಸದಸ್ಯ ಸುಧಾಕರ್ ಶೆಟ್ಟಿ ಮೈರ್ಮಾಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಪ್ರೈಮ್ ಟಿವಿಯ ನಿರ್ದೇಶಕ ರೂಪೇಶ್ ಕಲ್ಮಾಡಿ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಜಯ ಬೆಳ್ಕಳೆ, ರಾಮ್ ಸೇನಾ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಕರ್ಜೆ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ಗೌತಮ್ ಕೆ.ಬಿ. ವುುಂತಾದವರು ಉಪಸ್ಥಿತರಿದ್ದರು. ರಾಮ್ ಸೇನೆಯ ಜಿಲ್ಲಾ ವಕ್ತಾರ ರಮೇಶ್ ಕಲ್ಲೊಟ್ಟೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News