ಪೋರ್ಟರಿಕೊ: ಚಂಡಮಾರುತದಿಂದ ಬಿರುಕು ಬಿಟ್ಟಿರುವ ಅಣೆಕಟ್ಟೆ

Update: 2017-09-23 16:59 GMT

ಸಾನ್ ಜುವಾನ್ (ಪೋರ್ಟರಿಕೊ), ಸೆ. 23: ಪೋರ್ಟರಿಕೊದಲ್ಲಿ ‘ಮರಿಯಾ’ ಚಂಡಮಾರುತದ ಪ್ರಕೋಪದಿಂದಾಗಿ ನೀರಿನಿಂದ ತುಂಬಿಕೊಂಡಿರುವ ಅಣೆಕಟ್ಟೆಯೊಂದು ಬಿರುಕುಬಿಟ್ಟಿರುವ ಹಿನ್ನೆಲೆಯಲ್ಲಿ ಜಾಗ ಖಾಲಿ ಮಾಡುವಂತೆ ಸುಮಾರು 70,000 ನಿವಾಸಿಗಳಿಗೆ ಸೂಚಿಸಲಾಗಿದೆ.

ಕೆರಿಬಿಯನ್ ದ್ವೀಪ ಪೋರ್ಟರಿಕೊದ ವಾಯುವ್ಯ ಭಾಗದಲ್ಲಿ ಹರಿಯುತ್ತಿರುವ ‘ಗ್ವಜಟಕ’ ನದಿಯುದ್ದಕ್ಕೂ ವಾಸಿಸುತ್ತಿರುವ ಜನರಿಗೆ ಶುಕ್ರವಾರ ರಾಷ್ಟ್ರೀಯ ಹವಾಮಾನ ಸೇವಾ ಕಚೇರಿಯು ದಿಢೀರ್ ಪ್ರವಾಹದ ಎಚ್ಚರಿಕೆ ನೀಡಿದೆ. ಈ ನದಿಗೆ ಅಡ್ಡಲಾಗಿ 1920ರ ದಶಕದಲ್ಲಿ ನಿರ್ಮಿಸಲಾಗಿರುವ ಮಣ್ಣಿನ ಅಣೆಕಟ್ಟೆಯು ಕುಸಿಯುವ ಅಪಾಯವನ್ನು ಎದುರಿಸುತ್ತಿದೆ ಎಂದು ಎಚ್ಚರಿಸಲಾಗಿದೆ.

ಮರಿಯಾ ಚಂಡಮಾರುತದಿಂದಾಗಿ ಕೆರಿಬಿಯನ್‌ನಲ್ಲಿ 33 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 15 ಮಂದಿ ಡೊಮಿನಿಕದಲ್ಲಿ ಮೃತಪಟ್ಟರೆ, ಮೂರು ಮಂದಿ ಹೈಟಿಯಲ್ಲಿ ಹಾಗೂ ಇಬ್ಬರು ಗ್ವಾಡ್‌ಲೂಪ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

‘‘ಗ್ವಜಟಕ ನದಿಯನ್ನು ಆವರಿಸಿರುವ ಎಲ್ಲ ಪ್ರದೇಶಗಳ ಜನರು ತಕ್ಷಣ ಹೊರ ಹೋಗಬೇಕು. ಅವರ ಜೀವಗಳು ಅಪಾಯದಲ್ಲಿವೆ’’ ಎಂದು ಕಚೇರಿಯು ಟ್ವೀಟ್ ಮಾಡಿದೆ.

ಇದಾದ ಸ್ವಲ್ಪವೇ ಹೊತ್ತಿನಲ್ಲಿ ಗವರ್ನರ್ ರಿಕಾರ್ಡೊ ರೊಸೆಲೊ ಆದೇಶವೊಂದನ್ನು ಹೊರಡಿಸಿ, ನದಿ ದಂಡೆಯಲ್ಲಿ ವಾಸಿಸುವ ಸುಮಾರು 70,000 ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸೂಚನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News