ಭಾರತ ಮೂಲದ ವೈದ್ಯರನ್ನು ಗುಂಡಿಕ್ಕಿ ಹತ್ಯೆಗೈದ ವೈದ್ಯನಿಗೆ 32 ವರ್ಷ ಜೈಲು

Update: 2017-09-23 17:03 GMT

ನ್ಯೂ ಹ್ಯಾವನ್ (ಅಮೆರಿಕ), ಸೆ. 23: ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಭಾರತ ಮೂಲದ ವೈದ್ಯರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಮಾನಸಿಕ ಅಸ್ವಸ್ಥ ವೈದ್ಯನಿಗೆ ನ್ಯಾಯಾಲಯವೊಂದು ಶುಕ್ರವಾರ 32 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದಾಳಿಯಲ್ಲಿ ಸಂತ್ರಸ್ತರ ಗರ್ಭಿಣಿ ಪತ್ನಿಯು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.

ಇದರೊಂದಿಗೆ, ಹಂತಕನ ಮಾನಸಿಕ ಸ್ಥಿರತೆ ಬಗ್ಗೆ ಏಳು ವರ್ಷಗಳಿಂದ ನಡೆಯುತ್ತಿದ್ದ ನಾಟಕೀಯ ವಿಚಾರಣೆ ಮುಕ್ತಾಯಗೊಂಡಿದೆ. ವಿಚಾರಣೆ ಎದುರಿಸಲು ಆರೋಪಿಯನ್ನು ಸಮರ್ಥನಾಗಿಸುವುದಕ್ಕಾಗಿ ಆತನಿಗೆ ಈ ಅವಧಿಯಲ್ಲಿ ಬಲವಂತವಾಗಿ ಔಷಧ ನೀಡಲಾಗಿತ್ತು.

ಆರೋಪಿ ಚೀನಾ ಪ್ರಜೆ 51 ವರ್ಷದ ಲಿಶಾನ್ ವಾಂಗ್ ಜೂನ್‌ನಲ್ಲಿ ಶಿಕ್ಷೆಯನ್ನು ಸ್ವೀಕರಿಸಲು ಒಪ್ಪಿದ್ದನು. ತನ್ನ ವಿರುದ್ಧದ ಆರೋಪಗಳನ್ನು ಪ್ರಶ್ನಿಸುವುದಿಲ್ಲ ಎಂದು ಹೇಳಿದ್ದನು.

ವಾಂಗ್ 2010ರಲ್ಲಿ ಬ್ರಾನ್‌ಫೋರ್ಡ್‌ನಲ್ಲಿರುವ ಡಾ. ವಾಜಿಂದೀರ್ ತೂರ್ ನಿವಾಸದ ಹೊರಗೆ ತೂರ್ ಮತ್ತು ಅವರ ಹೆಂಡತಿ ಪರ್ಣಿತಾ ಸಿದು ಮೇಲೆ ಗುಂಡು ಹಾರಿಸಿದ್ದನು. ಈ ದಾಳಿಯಲ್ಲಿ ತೂರ್ ಸ್ಥಳದಲ್ಲೇ ಮೃತಪಟ್ಟಿದ್ದರು ಹಾಗೂ ಸಿದು ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದರು.

ಎರಡು ವರ್ಷಗಳ ಹಿಂದೆ ವಾಂಗ್ ಮತ್ತು ತೂರ್ ನ್ಯೂಯಾರ್ಕ್ ಸಿಟಿ ಆಸ್ಪತ್ರೆಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ತೂರ್ ಜೊತೆ ನಡೆದ ಜಗಳದ ಬಳಿಕ ವಾಂಗ್ ಹತಾಶನಾಗಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಹುಚ್ಚು ಗುಣಪಡಿಸಲು ಬಲವಂತದಿಂದ ಔಷಧಿ!

ಈ ಪ್ರಕರಣವು ಭಾರೀ ಪ್ರಚಾರ ಪಡೆದಿತ್ತು. ಮಾನಸಿಕ ಅಸ್ವಸ್ಥತೆ ಹೊಂದಿರುವ ವಾಂಗ್ ವಿಚಾರಣೆ ಎದುರಿಸಲು ಅನರ್ಹ ಎಂಬುದಾಗಿ 2015ರಲ್ಲಿ ಘೋಷಿಸಲಾಯಿತು. ಆತ ವಿಚಾರಣೆ ಎದುರಿಸಲು ಸಮರ್ಥನಾಗುವನೇ ಎಂಬುದನ್ನು ಪರೀಕ್ಷಿಸಲು ಆತನ ಇಚ್ಛೆಗೆ ವಿರುದ್ಧವಾಗಿ ಮಾನಸಿಕ ಅಸ್ವಸ್ಥತೆ ನಿವಾರಿಸುವ ಔಷಧಿ ನೀಡುವಂತೆ ನ್ಯಾಯಾಧೀಶ ಥಾಮಸ್ ಒ’ಕೀಫ್ ಜೂನಿಯರ್ ಆದೇಶ ನೀಡಿದರು.

ಬಲವಂತವಾಗಿ ಔಷಧಿ ತಿನ್ನಿಸಲು ನೀಡಲಾದ ಆದೇಶವನ್ನು ವಾಂಗ್‌ನ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದೇಶವು ಆತನ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ಆದರೆ, ಈ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು ಹಾಗೂ ಆ ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News