ದುರ್ಗಾ ಪೂಜೆಯ ವೆಚ್ಚ ಕಡಿತ ಮಾಡಿ ರೊಹಿಂಗ್ಯಾರಿಗೆ ನೆರವು

Update: 2017-09-23 17:08 GMT

ಢಾಕಾ (ಬಾಂಗ್ಲಾದೇಶ), ಸೆ. 23: ಮುಂಬರುವ ದುರ್ಗಾ ಪೂಜೆಯ ವೆಚ್ಚಗಳನ್ನು ಕಡಿತ ಮಾಡಿ, ಉಳಿದ ಹಣವನ್ನು ಮ್ಯಾನ್ಮಾರ್‌ನಿಂದ ವಲಸೆ ಬಂದಿರುವ ರೊಹಿಂಗ್ಯಾ ನಿರಾಶ್ರಿತರ ಪರಿಹಾರ ನಿಧಿಗೆ ನೀಡಲು ಬಾಂಗ್ಲಾದೇಶದ ಹಿಂದೂಗಳು ಶುಕ್ರವಾರ ನಿರ್ಧರಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಬೆದರಿ ಆಗಸ್ಟ್ 25ರಿಂದ 4.2 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಈ ಪೈಕಿ ಹೆಚ್ಚಿನವರು ಮುಸ್ಲಿಮರು.

 ಅದೇ ವೇಳೆ, ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ವಾಸಿಸುತ್ತಿದ್ದ ಸುಮಾರು 800 ಹಿಂದೂಗಳೂ ಸೇನಾ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ವರದಿಗಳು ಹೇಳಿವೆ.

ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯು ಜನಾಂಗೀಯ ನಿರ್ಮೂಲನೆಯಾಗಿದೆ ಎಂದು ವಿಶ್ವಸಂಸ್ಥೆ ಬಣ್ಣಿಸಿದೆ.

‘‘ರೊಹಿಂಗ್ಯಾ ನಿರಾಶ್ರಿತರ ಬೃಹತ್ ವಲಸೆ ಭಯಾನಕ ಮಾನವೀಯ ಬಿಕ್ಕಟ್ಟೊಂದನ್ನು ತೆರೆದಿಟ್ಟಿದೆ. ಹಿಂಸೆಗೆ ಒಳಗಾಗಿರುವ ನಿರಾಶ್ರಿತರ ಪರವಾಗಿ ನಾವು ನಿಲ್ಲುತ್ತೇವೆ. ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಖರ್ಚು ಕಡಿಮೆ ಮಾಡಿ ಉಳಿದ ಹಣವನ್ನು ನಿರಾಶ್ರಿತರ ನೆರವಿಗೆ ನೀಡುತ್ತೇವೆ’’ ಎಂದು ಪೂಜಾ ಆಚರಣೆ ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಳಿಸಿದರು.

ಮ್ಯಾನ್ಮಾರ್ ಪತ್ರಕರ್ತರಿಗೆ ಜಾಮೀನು

ರೊಹಿಂಗ್ಯಾ ಮುಸ್ಲಿಮರ ವಲಸೆ ಬಗ್ಗೆ ವರದಿ ಮಾಡುತ್ತಿದ್ದಾಗ ಬಂಧಿಸಲ್ಪಟ್ಟಿದ್ದ ಮ್ಯಾನ್ಮಾರ್‌ನ ಇಬ್ಬರು ಪತ್ರಕರ್ತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

 ಬಾಂಗ್ಲಾದೇಶದ ಕಾಕ್ಸ್ ಬಝಾರ್ ಗಡಿ ಪರಿಸರದಲ್ಲಿ ಸೆಪ್ಟಂಬರ್ ತಿಂಗಳ ಆದಿ ಭಾಗದಲ್ಲಿ ಈ ಪತ್ರಕರ್ತರನ್ನು ಬಂಧಿಸಲಾಗಿತ್ತು. ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಬೆದರಿ ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರು ಇಲ್ಲಿಗೆ ಪಲಾಯನಗೈಯುತ್ತಿದ್ದಾರೆ.

‘‘ನ್ಯಾಯಾಲಯವೊಂದು ಅವರಿಗೆ ಜಾಮೀನು ನೀಡಿದೆ. ಆದರೆ ಅವರು ಈಗ ತಮ್ಮ ದೇಶಕ್ಕೆ ಮರಳುವಂತಿಲ್ಲ’’ ಎಂದು ಪೊಲೀಸ್ ಅಧಿಕಾರಿ ರಣಜಿತ್ ಕುಮಾರ್ ಬರುವ ‘ರಾಯ್ಟರ್ಸ್’ಗೆ ತಿಳಿಸಿದರು.

ಅವರು ತಮ್ಮ ದೇಶಕ್ಕೆ ಮರಳಬಹುದೇ ಎಂಬುದನ್ನು ನ್ಯಾಯಾಲಯ ಇನ್ನೊಂದು ಪ್ರತ್ಯೇಕ ವಿಚಾರಣೆಯಲ್ಲಿ ತೀರ್ಮಾನಿಸಲಿದೆ ಎಂದರು. ಮುಂದಿನ ವಾರ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಪ್ರವಾಸಿ ವೀಸಾದಲ್ಲಿದ್ದ ಈ ಪತ್ರಕರ್ತರು ಜರ್ಮನ್ ಮ್ಯಾಗಝಿನ್‌ಗಾಗಿ ಕೆಲಸ ಮಾಡುತ್ತಿದ್ದಾಗ ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News