×
Ad

ಕೃಷ್ಣಪ್ಪ ಕೋಟ್ಯಾನ್‌ಗೆ ದಾಮೋದರ ಸುವರ್ಣ ಪ್ರಶಸ್ತಿ ಪ್ರದಾನ

Update: 2017-09-24 19:31 IST

ಮಂಗಳೂರು, ಸೆ.24: ಅಖಲಿ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಗರದ ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್. ಸುವರ್ಣ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಮಾಜಿಕ ನೇತಾರ ಕೆ. ಕೃಷ್ಣಪ್ಪ ಕೋಟ್ಯಾನ್‌ರಿಗೆ ದಾಮೋದರ ಸುವರ್ಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನಗೈದು ಮಾತನಾಡಿದ ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಲ್ಲವ ಸಮಾಜವು ರಾಜಕೀಯ ನಾಯಕರನ್ನು ರೂಪುಗೊಳಿಸಬೇಕೇ ವಿನಃ ಈ ಸಮಾಜವು ರಾಜಕೀಯ ದಾಳವಾಗಬಾರದು ಎಂದರು.

ನಾವು ಅಕ್ಷರಸ್ಥರಾಗಿದ್ದೇವೆ ಹೊರತು ವಿದ್ಯಾವಂತರಾಗಿಲ್ಲ. ಧರ್ಮ, ಜಾತಿ, ಭಾಷೆಯ ಅಡಿಯಾಳುಗಳಾಗದೆ ಸ್ವಂತ ಕಾಲಿನ ಮೇಲೆ ನಾವು ನಿಲ್ಲಬೇಕು. ರಾಜಕೀಯವೆಂದರೆ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಶ್ರಮಿಸುವುದಾಗಿದೆ. ದಾಮೋದರ ಆರ್. ಸುವರ್ಣ ಅವರು ದುರ್ಬಲ ವರ್ಗದ ಏಳಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನಿಟ್ಟುಕೊಳ್ಳದೆ ಬಡವರಿಗಾಗಿ ದುಡಿದಿದ್ದಾರೆ ಎಂದು ಬಣ್ಣಿಸಿದರು.

ಅಖಲಿ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ದಿ. ದಾಮೋದರ ಸುವರ್ಣ ಅವರ ಪತ್ನಿ ವಾರಿಜಾ ಡಿ. ಸುವರ್ಣ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಹಾಗೂ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಸನಿಲ್, ಕಾಟಿಪಳ್ಳ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಸಾಧು ಪೂಜಾರಿ, ಸುಮಲತಾ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ವಸಂತ ಕುಮಾರ್ ಸ್ವಾಗತಿಸಿದರು. ಕಾಶಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಸ್ಥಾಪಕ ದಿ. ದಾಮೋದರ ಆರ್. ಸುವರ್ಣ ಅವರ 93ನೆ ಜನ್ಮದಿನಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News